ನಾಳೆಯಿಂದ ʼಕರ್ನಾಟಕ ಇಂಟರ್ ನ್ಯಾಶನಲ್ ಟೂರಿಸಂ ಎಕ್ಸ್ಪೋʼ: ಎಚ್.ಕೆ.ಪಾಟೀಲ್

ಎಚ್.ಕೆ.ಪಾಟೀಲ್
ಹುಬ್ಬಳ್ಳಿ : ವಿಶ್ವಕ್ಕೆ ರಾಜ್ಯದ ಅದ್ಭುತ ಪ್ರವಾಸಿ ತಾಣಗಳ ಪರಿಚಯ ಮಾಡಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿಯ ಸಹಯೋಗದೊಂದಿಗೆ ನಾಳೆಯಿಂದ(ಫೆ.26) ಫೆ.28ರ ವರೆಗೆ ‘ಕರ್ನಾಟಕ ಇಂಟರ್ ನ್ಯಾಶನಲ್ ಟೂರಿಸಂ ಎಕ್ಸ್ಪೋ’ವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ಪೋವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಮಂಗಳವಾರ ಹುಬ್ಬಳ್ಳಿಯ ಸಕ್ರ್ಯೂಟ್ ಹೌಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.27 ಮತ್ತು 28ರಂದು 2 ದಿನಗಳ ಕಾಲ ವ್ಯವಹಾರಿಕ ಸಭೆಗಳು ನಡೆಯಲಿವೆ. ನಮ್ಮ ರಾಜ್ಯದಲ್ಲಿ ಅಸಂಖ್ಯಾತ ಪ್ರವಾಸಿ ತಾಣಗಳು, ಸ್ಮಾರಕಗಳು ಇವೆ. 25 ಸಾವಿರಕ್ಕೂ ಹೆಚ್ಚು ಅರಕ್ಷಿತ ಸ್ಮಾರಕಗಳಿದ್ದು, ಅವುಗಳಲ್ಲಿ 800ಕ್ಕೂ ಹೆಚ್ಚು ಸ್ಮಾರಕಗಳನ್ನು ರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗಿದೆ ಎಂದು ಹೇಳಿದರು.
ಮುಂದಿನ ಪೀಳಿಗೆಗೆ ಇವುಗಳ ಮಹತ್ವವನ್ನು ತಿಳಿಸಲು ಹಾಗೂ ಅವುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಮಹಾತ್ಕಾರ್ಯಕ್ಕೆ ನಮ್ಮ ಸರಕಾರ ಮುಂದಾಗಿದೆ. ನಮ್ಮ ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ, ಕರಕುಶಲ ಉತ್ಪನ್ನಗಳು, ಪಾಕ ಪದ್ಧತಿ, ನೃತ್ಯ ಪ್ರಕಾರಗಳು, ಜೀವನ ಶೈಲಿ, ಅತಿಥಿ ಸತ್ಕಾರ ಇತ್ಯಾದಿಗಳನ್ನು ಈ ಸಂದರ್ಭದಲ್ಲಿ ಪ್ರದರ್ಶನ ಮಾಡಲಾಗುವುದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಪ್ರವಾಸೋದ್ಯಮದ ಸಮಗ್ರ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲುವುದು ನಮ್ಮ ಸರಕಾರದ ಗುರಿಯಾಗಿದ್ದು, ಅದರ ಪೈಕಿ ಎಕ್ಸ್ಪೋ ಒಂದು ಬಹುಮುಖ್ಯವಾದ ಚಟುವಟಿಕೆಯಾಗಿದೆ. ಕೆಲವೇ ಕೆಲವು ರಾಜ್ಯಗಳು ಈ ಮಾದರಿಯ ಬಿ2ಬಿ ಸಮಾವೇಶಗಳನ್ನು ದೇಶದಲ್ಲಿ ಆಯೋಜನೆ ಮಾಡುತ್ತಿದ್ದು, ಅದರಲ್ಲಿ ನಮ್ಮ ರಾಜ್ಯವು ಒಂದಾಗಿದೆ. ನಮ್ಮ ಈ ಕ್ರಮಕ್ಕೆ ಕೇಂದ್ರ ಸರಕಾರವು ಬೆಂಬಲ ನೀಡಿದ್ದು, ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು ಈ ಸಮಾವೇಶದಲ್ಲಿ ಭಾಗವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರವಾಸೋದ್ಯಮ ವಲಯದ ಎಲ್ಲಾ ಭಾಗಿದಾರರನ್ನು ಒಂದೇ ಸೂರಿನಡಿ ಕರೆತಂದು ಈ ವಲಯದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿ ಮಾರ್ಗೋಪಾಯಗಳನ್ನು ಪಡೆಯುವ ಉದ್ದೇಶ ಹೊಂದಲಾಗಿದೆ. ಹೊಟೇಲ್ ಉದ್ಯಮಿದಾರರು, ಟ್ರಾವಲ್ ಏಜೆನ್ಸಿಗಳು, ಹೋಂ ಸ್ಟೇ ಮಾಲಕರು, ಕೃಷಿ ಪ್ರವಾಸೋದ್ಯಮದ ಪ್ರವರ್ತಕರು, ಪ್ರವಾಸಿ ಮಾರ್ಗದರ್ಶಿಗಳು, ಮಹಿಳಾ ಉದ್ಯಮಿದಾರರು ಈ ವಲಯಕ್ಕೆ ಸಂಬಂಧಪಟ್ಟವರೆಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಪಾರದರ್ಶಕ ಸ್ಪರ್ಧಾತ್ಮಕ ಪ್ರಕ್ರಿಯೆ ಮೂಲಕ ದೇಶಿ, ವಿದೇಶಿ ಖರೀದಿದಾರರನ್ನು ಆಯ್ಕೆ ಮಾಡಲಾಗಿದೆ. 36 ದೇಶಗಳ 300 ಜನರ ಸಂದರ್ಶನ ನಡೆಸಿ, ಸುಮಾರು 110ಕ್ಕೂ ಹೆಚ್ಚು ವಿದೇಶಿ ಖರೀದಿದಾರರು, ಏಜೆಂಟ್ ಗಳು ಮತ್ತು 15ಕ್ಕೂ ಹೆಚ್ಚು ವಿದೇಶಿ ಟ್ರಾವೆಲ್ ಮಾಧ್ಯಮದವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ 858ಕ್ಕೂ ಹೆಚ್ಚು ದೇಶಿಯ ಖರೀದಿದಾರರ ಸಂದರ್ಶನ ನಡೆಸಿ, ಸುಮಾರು 235ಕ್ಕೂ ಹೆಚ್ಚು ದೇಶಿಯ ಖರೀದಿದಾರರು ಮತ್ತು 20ಕ್ಕೂ ಹೆಚ್ಚು ದೇಶಿ ಟ್ರಾವೆಲ್ ಮಾಧ್ಯಮದವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಸಂಪರ್ಕ ಸೇತುವೆಯಾಗಿ ಪ್ರವಾಸೋದ್ಯಮ ಇಲಾಖೆಯು ಎಕ್ಸ್ಪೋ ಮೂಲಕ ಕೆಲಸ ಮಾಡುತ್ತಿದೆ. 3 ದಿನಗಳಲ್ಲಿ 16 ಸಾವಿರ ವ್ಯವಹಾರಿಕ ಸಭೆಗಳು ನಡೆಯಲಿವೆ. ಪ್ರತಿ ಭಾಗಿದಾರನು ಕಡ್ಡಾಯವಾಗಿ 40 ಸಭೆಗಳನ್ನು 2 ದಿನಗಳಲ್ಲಿ ನಮ್ಮ ಭಾಗಿದಾರರೊಂದಿಗೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಈ 3 ದಿನಗಳಲ್ಲಿ ನಮ್ಮ ರಾಜ್ಯದ ಶ್ರೀಮಂತ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಶೈಲಿಯ ಪರಿಚಯ, ನೆಟ್ವರ್ಕಿಂಗ್ ಮೀಟಿಂಗ್ ಗಳು, ಫ್ರಿ ಮತ್ತು ಪೋಸ್ಟ್ ಎಫ್ಎಎಮ್ ಟೂರ್ ಗಳು ನಡೆಯಲಿವೆ. ವಿದೇಶಿ ಏಜೆಂಟ್ ಗಳಿಗೆ ಕಡ್ಡಾಯವಾಗಿ ಕರ್ನಾಟಕ ಹೆರಿಟೇಜ್ ಡಿಸ್ಕವರಿ, ಕರಾವಳಿ ಕರ್ನಾಟಕ, ವನ್ಯಜೀವಿ ಹಾಗೂ ಬೆಟ್ಟಗಳು ಮತ್ತು ರಾಯಲ್ ಮೈಸೂರು ಹೆರಿಟೇಜ್ನ 5 ದಿನಗಳ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. 30 ಜನರ 5 ತಂಡಗಳನ್ನಾಗಿ ವಿಂಗಡಿಸಿ, ಈ ಪ್ರವಾಸದಲ್ಲಿ ಭಾಗವಹಿಸಿದವರೆಲ್ಲರೂ ನಮ್ಮ ರಾಜ್ಯದ ಸಂಸ್ಕೃತಿ, ಕಲೆಗೆ ಮಾರು ಹೋಗಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲಾ ಭಾಗದ 150ಕ್ಕೂ ಹೆಚ್ಚು ಭಾಗಿದಾರರು(ಹೊಟೇಲ್, ರೆಸಾರ್ಟ್, ಹೋಂ ಸ್ಟೇ, ಟ್ರಾವೆಲ್ ಆಪರೇಟರ್ ಗಳು, ಕೃಷಿ ಪ್ರವಾಸೋದ್ಯಮ ಭಾಗಿದಾರರು) ಭಾಗವಹಿಸಲಿದ್ದು, ಎಲ್ಲರಿಗೂ ತಮ್ಮ ತಮ್ಮ ಉತ್ಪನ್ನಗಳ ಪ್ರದರ್ಶನಕ್ಕಾಗಿ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೇ, ಕಾವೇರಿ ಹ್ಯಾಂಡಿಕ್ರಾಪ್ಟ್, ಕೆಎಸ್ಐಸಿ, ಕಾಫಿ ಮಂಡಳಿ, ಕೆಎಸ್ಡಿಎಲ್, ಕೆಎಂಎಫ್ ಮಳಿಗೆಗಳನ್ನು ತೆರೆಯಲಿದ್ದು, ರಾಜ್ಯದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರುತ್ತದೆ ಎಂದು ಅವರು ತಿಳಿಸಿದರು.
ಪುರಾತತ್ವ, ವಸ್ತು ಸಂಗ್ರಹಾಲಯಗಳು, ಪರಂಪರೆ ಇಲಾಖೆ, ಸುವರ್ಣ ರಥ, ಪ್ರವಾಸೋದ್ಯಮ ಇಲಾಖೆ ಮಳಿಗೆಗಳನ್ನು ತೆರೆಯಲಾಗುವುದು. ಯೋಗ, ರೋಸ್ ವುಡ್ ಇನ್ ಲೇ ಕಾರ್ವಿಂಗ್, ಸಂಡೂರು ಕಸೂತಿ, ಬಿದ್ರಿ ಮುಂತಾದ ಕಲೆಗಳ ಚಟುವಟಿಕೆಗಳ ಪ್ರದರ್ಶನ ನೀಡಲಾಗುವುದು. ಮುಂದಿನ ವರ್ಷಗಳಲ್ಲಿ ಅಂದಾಜು 1 ಕೋಟಿ ದೇಶಿ ಪ್ರವಾಸಿಗರು ಮತ್ತು 1 ಲಕ್ಷ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಈ ಮೂಲಕ ರಾಜ್ಯಕ್ಕೆ ವಿದೇಶಿ ವಿನಿಮಯ ಹೆಚ್ಚಾಗಲಿದೆ. ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಮೂಲಕ ರಾಜ್ಯಕ್ಕೆ ಆದಾಯ ಬರುತ್ತದೆ. ಮುಂದಿನ 3-4 ವರ್ಷಗಳಲ್ಲಿ ಅಂದಾಜು 2,750 ಕೋಟಿ ರೂ.ಆದಾಯ ರಾಜ್ಯಕ್ಕೆ ಬರುವ ನಿರೀಕ್ಷೆಯಿದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ದೊಡ್ಡ ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ವಿವಿಧ ವಲಯಗಳ ಜೊತೆಗೆ ಪ್ರವಾಸೋದ್ಯಮ ಬೆಳವಣಿಗೆ ಹೊಂದಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಎಂ.ಎಂ.ಹಿಂಡಸಗೇರಿ, ಮುಖಂಡರಾದ ಸದಾನಂದ ಡಂಗನವರ, ಮಹೇಂದ್ರ ಸಿಂಘಿ ಉಪಸ್ಥಿತರಿದ್ದರು.