ರಾಜ್ಯದಲ್ಲಿ ಎತ್ತುಗಳ ಸಾಕಾಣಿಕೆ ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ : ಎಚ್.ಕೆ.ಪಾಟೀಲ್

ಬೆಂಗಳೂರು : ‘ಗೋ ಶಾಲೆಗಳಿಗೂ ಎತ್ತುಗಳಿಗೂ(ಹೋರಿ) ಯಾವುದೇ ಸಂಬಂಧವಿಲ್ಲ. ರಾಜ್ಯದಲ್ಲಿ ಎತ್ತುಗಳ ಸಾಕಾಣಿಕೆ ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಜೆಡಿಎಸ್‍ನ ಹಿರಿಯ ಸದಸ್ಯ ಜಿ.ಟಿ.ದೇವೇಗೌಡ ಬಜೆಟ್ ಮೇಲೆ ಚರ್ಚೆಯ ವೇಳೆ, ‘ಎತ್ತುಗಳ ಸಾಕಾಣಿಕೆ ಕಡಿಮೆಯಿದೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣಗಳ ಅವಲಂಬನೆ ಅನಿವಾರ್ಯ. ಈ ಹಿಂದೆ ಕೃಷಿ ಯಂತ್ರಧಾರೆ ಯೋಜನೆ ಉತ್ತಮವಾಗಿತ್ತು. ಈಗ ಅದು ನಿರ್ಲಕ್ಷಕ್ಕೆ ಒಳಗಾಗಿದೆ’ ಎಂದು ಗಮನ ಸೆಳೆದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ‘ಎತ್ತುಗಳ ಸಾಕಾಣಿಕೆ ಕಡಿಮೆಯಾಗುತ್ತಿರುವುದು ಆತಂಕಕಾರಿ. ಕೃಷಿ ಯಂತ್ರೋಪಕರಣಗಳ ಬಳಕೆ ವಿಚಾರವಾಗಿ ಸದಸ್ಯರ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಎತ್ತುಗಳ ಸಾಕಾಣಿಕೆ ಕಡಿಮೆಯಾಗುತ್ತಿರುವ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಸಮಾಜ ಬಯಸುತ್ತದೆ ಎಂದು ತಿಳಿಸಿದರು.
ಈ ಹಿಂದೆ ಪ್ರತಿಯೊಂದು ಮನೆಯಲ್ಲಿಯೂ 7ರಿಂದ 8 ಜೋಡೆತ್ತುಗಳಿರುತ್ತಿದ್ದವು. ಇದೀಗ ಒಂದೇ ಒಂದು ಜೋಡಿಯೂ ಎತ್ತುಗಳಿಲ್ಲ. ಅಲ್ಲದೆ, ಸಗಣಿ ಬಳಿಯಬೇಕೆಂದು ಬಹಳಷ್ಟು ಜನರು ಎತ್ತುಗಳನ್ನೇ ಕಟ್ಟುತ್ತಿಲ್ಲ. ಎಲ್ಲರೂ ಯಂತ್ರೋಪಕರಣಗಳನ್ನು ಆಶ್ರಯಿಸಿದ್ದಾರೆ ಎಂದು ಪಾಟೀಲ್ ಹೇಳಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಮುಚ್ಚಿ ಹೋಗಿರುವ ಗೋಶಾಲೆಗಳನ್ನು ಪುನರ್ ಆರಂಭಿಸಿಸಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಆಕ್ಷೇಪಿಸಿದ ಎಚ್.ಕೆ. ಪಾಟೀಲ್, ‘ಗೋಶಾಲೆಗಳಿಗೂ, ಎತ್ತುಗಳಿಗೂ ಸಂಬಂಧ ಇಲ್ಲ. ಗದಗನಲ್ಲಿ ಎತ್ತುಗಳಿಗಾಗಿ ಹಾಸ್ಟೆಲ್ ಸ್ಥಾಪಿಸಲಾಗಿದೆ. ಅಲ್ಲಿ ಉಚಿತ ಸೇವೆ ಬೇಕೆಂದು ಹಲವರು ಬಯಸುತ್ತಾರೆ. ಎತ್ತುಗಳ ಸಾಕಾಣಿಕೆ ಕಡಿಮೆಯಾಗಿರುವುದು ಸಮಾಜ ಆಯೋಚಿಸಬೇಕಾದ ವಿಚಾರ’ ಎಂದರು.
ಬಳಿಕ ಮಾತು ಮುಂದುವರಿಸಿದ ಜಿ.ಟಿ.ದೇವೇಗೌಡ, ‘ಈ ಹಿಂದೆ ನೀರು ಎತ್ತಲು ಎತ್ತುಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದೀಗ ಎಲ್ಲವೂ ಯಂತ್ರೋಪಕರಣಮಯವಾಗಿದೆ. ದನಗಳ ಸಾಕಾಣಿಕೆ ಖರ್ಚು ಹೆಚ್ಚಾಗುತ್ತಿದೆ. ಅವುಗಳ ಮಾರುಕಟ್ಟೆ ಉತ್ತಮವಾಗಿಲ್ಲ, ಸಾವಯವ ಕೃಷಿಗೆ ಸಗಣಿ ಬೇಕು, ಅದೂ ಲಭ್ಯವಾಗುತ್ತಿಲ್ಲ’ ಎಂದು ಹೇಳಿದರು.