ಪೊಲೀಸರ ವಶದಲ್ಲಿದ್ದ ಯುವಕನ ಸಾವು ಪ್ರಕರಣ : ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು?
ಬೆಂಗಳೂರು : ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಆದಿಲ್ ವಿರುದ್ಧ ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ಠಾಣೆಗೆ ಕರೆತಂದಿದ್ದರು. ಠಾಣೆಗೆ ಕರೆತಂದು 7 ನಿಮಿಷದೊಳಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆದಿಲ್ ಮೃತಪಟ್ಟಿದ್ದಾನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ತಿಳಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗುವ ಪ್ರಯತ್ನ ಕೂಡ ಮಾಡಿದ್ದಾರೆ. ಆದರೆ ಯುವಕ ಹೇಗೆ ಮೃತಪಟ್ಟಿದ್ದಾನೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ" ಎಂದು ಹೇಳಿದರು.
ʼಸಹಜವಾಗಿ ಕಲ್ಲು ತೂರಾಟ ಆದಾಗ ಅಲ್ಲಿರುವ ಪೊಲೀಸರಿಗೂ ಗಾಯಗಳಾಗುತ್ತದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇಂತಹ ಗುಂಪು ಘರ್ಷಣೆಗಳು, ರೌಡಿಸಂಗಳು ಯಾರನ್ನೂ ಹೇಳಿ ಕೇಳಿ ಮಾಡಲ್ಲ. ಇದ್ದಕ್ಕಿದ್ದಂತೆ ಹೀಗೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಏನು ಬೇಕಾದರೂ ಮಾಡಬಹುದು ಅನ್ನೋದನ್ನು ನಾವು ಬಿಡಲ್ಲ. ಪೊಲೀಸ್ ಠಾಣೆಗೆ ಬಂದು ಧಮ್ಕಿ ಹಾಕುವವರನ್ನು ಸುಮ್ಮನೆ ಬಿಡಲು ಆಗುತ್ತಾ?. ಪೊಲೀಸರು ಅಂತವರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆʼ ಎಂದು ಎಚ್ಚರಿಸಿದರು.
ಕೆಟ್ಟ ಹೆಸರು ತರುವುದು ಸಲ್ಲ: ‘ನಮ್ಮವರೇ ಬೆಂಗಳೂರಿನ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಹೊರ ದೇಶದವರಿಗೆ, ಹೊರ ಜನರಿಗೆ ಬೆಂಗಳೂರಿನ ಬಗ್ಗೆ ಏನನ್ನು ಬಿಂಬಿಸಲು ಹೊರಟಿದ್ದೀರಿ?’ ಎಂದು ಪ್ರತಿಪಕ್ಷ ಬಿಜೆಪಿಯನ್ನು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಬ್ರ್ಯಾಂಡ್ ಬೆಂಗಳೂರು’ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ನಿಗದಿತವಾದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ. ಎಲ್ಲರ ಆಡಳಿತಾವಧಿಯಲ್ಲಿಯೂ ಮಳೆಗಾಲದಲ್ಲಿ ರಸ್ತೆ ಗುಂಡಿ ಬೀಳುವುದು, ಚರಂಡಿಯಲ್ಲಿ ಕಸ ತುಂಬಿಕೊಂಡು ನೆರೆ ಆಗಿದೆ. ಇದನ್ನು ಆಧರಿಸಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಬಿಂಬಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
‘ಉಡ್ತಾ ಬೆಂಗಳೂರು, ಬ್ರ್ಯಾಂಡ್ ಬೆಂಗಳೂರು ಅಲ್ಲ ಗುಂಡಿ ಬೆಂಗಳೂರು ಅನ್ನುವುದು. ಹೊರ ದೇಶದವರಿಗೆ ಏನು ಚಿತ್ರಣ ಬಿಂಬಿಸಲು ಹೊರಟಿದ್ದೀರಿ?. ನಮ್ಮ ಮೇಲೆ, ನಮ್ಮ ಸರಕಾರದ ಮೇಲೆ ಆರೋಪಿಸಲಿ. ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ, ನೀವೆ ಬೆಂಗಳೂರಿಗೆ ಕೆಟ್ಟ ಹೆಸರು ತರುತ್ತಿದ್ದೀರಿ ಎಂದು ಡಾ.ಪರಮೇಶ್ವರ್ ಎಚ್ಚರಿಸಿದರು.
‘ಅನೇಕ ವಿಚಾರಗಳ ಬಗ್ಗೆ ಬಿಜೆಪಿಯವರು ಇಲ್ಲ-ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರಿಯಾದ ಸಂದರ್ಭದಲ್ಲಿ ಉತ್ತರಿಸಲಾಗುವುದು. ಏನಾದರೂ ನಿರ್ಧಿಷ್ಟವಾಗಿ ಹೇಳುವುದಿದ್ದರೆ ಹೇಳಲಿ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ಪೊಲೀಸ್ ಆಯುಕ್ತರು ಇದ್ದಾರೆ. ಅವರಿಗೆ ತಿಳಿಸಿದರೆ ಕ್ರಮ ತೆಗೆದುಕೊಳ್ಳುತ್ತಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಹೇಳಿಕೆಗಳಿಂದ ಪರಿಹಾರ ಕಂಡುಕೊಳ್ಳಲಾಗುವುದಿಲ್ಲ ಎಂದು ಅವರು ತಿಳಿಸಿದರು
ಪತ್ರಕ್ಕೆ ಪ್ರಧಾನಿ ಕಚೇರಿಯಲ್ಲಿ ಬೆಲೆ ಸಿಗಲಿಲ್ಲವೇ?
ಸಿಎಂ, ಪ್ರಧಾನಿಗೆ ಬರೆದ ಪತ್ರ ಮೇ 21ರಂದು ತಲುಪಿದೆ ಎಂಬುದಾಗಿ ವಿದೇಶಾಂಗ ಸಚಿವರು ಹೇಳಿದ್ದಾರೆ. ಮುಖ್ಯಮಂತ್ರಿಯವರು ಬರೆದಿದ್ದ ಪತ್ರ ವಿಚಾರವನ್ನು ಪ್ರಧಾನಿ ಕಚೇರಿಯವರು ವಿದೇಶಾಂಗ ಇಲಾಖೆಯ ಕಚೇರಿಗೆ ತಿಳಿಸಿಲ್ಲ ಎಂಬುದು ಗೊತ್ತಾಗುತ್ತದೆ. ಪತ್ರಕ್ಕೆ ಪ್ರಧಾನಿ ಕಚೇರಿಯಲ್ಲಿ ಬೆಲೆ ಸಿಗಲಿಲ್ಲವೇ?. ವಿದೇಶಾಂಗ ಇಲಾಖೆಯ ಕಚೇರಿಗೆ ತಿಳಿಸಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಯಾವ ರೀತಿ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ ಅನ್ನುವುದನ್ನು ಇದರಿಂದ ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು.