ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ ಪ್ರಕರಣ: ಸಿಐಡಿ ತನಿಖೆ ಆದೇಶಕ್ಕೆ ಹೊರಟ್ಟಿ ಆಕ್ಷೇಪ
ಬಸವರಾಜ ಹೊರಟ್ಟಿ
ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ಆಕ್ಷೇಪಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ.ಪರಮೇಶ್ವರ್ಗೆ ಪತ್ರ ಬರೆದಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿಧಾನಪ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಬೆಳಗಾವಿ ಅಧಿವೇಶನದ ಕೇಳಿಬಂದಿತ್ತು. ಈ ಪ್ರಕರಣದ ತನಿಖೆ ಸಿಐಡಿಗೆ ವಹಿಸಿದ್ದಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವನ್ನು ಯಾವ ಕಾರಣಕ್ಕೆ ಸಿಐಡಿಗೆ ವಹಿಸಲಾಗಿದೆ ಎಂದು ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಸದನದಲ್ಲಿ ನಡೆದ ಘಟನೆಯ ಬಗ್ಗೆ ಚರ್ಚಿಸುವುದು, ಮುಕ್ತಾಯ ಮಾಡುವುದು, ತೀರ್ಮಾನಿಸುವುದರಲ್ಲಿ ಸದನಕ್ಕೆ ಸಾರ್ವಭೌಮತ್ವ ಅಧಿಕಾರ ಇರುತ್ತದೆ. ಡಿಸೆಂಬರ್ 19ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪರಾಮರ್ಶಿಸಿಕೊಂಡು ಪೀಠದಿಂದ ತೀರ್ಪು ನೀಡಲಾಗಿದೆ ಎಂದಿದ್ದಾರೆ.
ಸದನದ ಆವರಣದ ಒಳಗೆ ಶಿಸ್ತು ಸಂರಕ್ಷಿಸುವುದು ವ್ಯವಹರಣೆ ನಿಯಂತ್ರಿಸುವ ಅಧಿಕಾರ ಸಭಾಪತಿಗೆ ಪ್ರದತ್ತವಾಗಿದೆ. ಸಭಾಪತಿ ತೀರ್ಪೇ ಇದರಲ್ಲಿ ಅಂತಿಮ. ಶಾಸಕಾಂಗಕ್ಕೆ ಮತ್ತು ಸಭಾಪತಿಯವರಿಗೆ ಪ್ರದತ್ತವಾದ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ಕಾರ್ಯಾಂಗವು ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಸಾಂವಿಧಾನಿಕ ಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಭಾಸವಾಗುತ್ತಿದೆ. ವಿನಾಕಾರಣ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಂಘರ್ಷದ ಪ್ರಮೇಯ ನಿರ್ಮಾಣ ಆಗಬಾರದು. ಸದನದಲ್ಲಿ ನಡೆದ ಘಟನೆ ಸಭಾಪತಿಯವರ ಕಾರ್ಯವ್ಯಾಪ್ತಿಗೆ ನಿಹಿತವಾಗಿರುವುದು ತಮಗೆ ತಿಳಿದ ವಿಚಾರ ಎಂದು ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.