ವಿಜಯೇಂದ್ರ ಮನೆ ಎದುರಿನಿಂದ ಪ್ರವಾಸ ಮಾಡುತ್ತೇನೆ : ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ
ಬೆಂಗಳೂರು : "ನಾನು ಶಿಕಾರಿಪುರಕ್ಕೆ ಒಬ್ಬನೇ ಬರುತ್ತೇನೆ. ವಿಜಯೇಂದ್ರ ಮನೆ ಮುಂದಿನಿಂದಲೇ ಪ್ರವಾಸ ಶುರು ಮಾಡುತ್ತೇನೆ. ಸವಾಲು ಸ್ವೀಕರಿಸಿದ್ದೇನೆ ಎಂದು ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಗೋಕಾಕ್ ತಾಲೂಕಿನ ಅಂಕಲಗಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯೇಂದ್ರ ಅವರೇ ನೀವೇ ದಿನಾಂಕ ನಿಗದಿ ಮಾಡಿ, ಬೆಂಬಲಿಗರು, ಗನ್ಮ್ಯಾನ್ ಬರುವುದಿಲ್ಲ. ಒಬ್ಬನೇ ಬರುತ್ತೇನೆ. ಎಂದು ಸವಾಲು ಹಾಕಿದ್ದಾರೆ. ನಿನ್ನ ಬೇಕಾದರೆ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದಂತೆ ಮಾಡುವ ಶಕ್ತಿ ನನಗಿದೆ. ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನಲ್ಲ. ವಿಜಯೇಂದ್ರ ಮೇಲೆ ನನಗೆ ಗೌರವ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಗೌರವ ಇದೆ ಎಂದು ಹೇಳಿದರು.
ವಿಜಯೇಂದ್ರ ಬೆನ್ನು ಹತ್ತಿದರೆ ಯಡಿಯೂರಪ್ಪನವರೇ ಹಾಳಾಗುತ್ತೀರಿ. ಅವರನ್ನು ಬದಲಿಸಿ ಹೊಸಬರಿಗೆ ಅವಕಾಶ ಕೊಡಿ. ಇನ್ನೇನು ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲ್ಲ. ಪದೇ ಪದೆ ಸೈಕಲ್ ಮೇಲೆ ಓಡಾಡಿದೀನಿ ಅಂತಾ ಹೇಳಬೇಡಿ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದ್ದೀರಿ. ಇದನ್ನು ನೀವು ಹೇಳಬೇಡಿ, ಅವಮಾನ ಆಗುತ್ತದೆ. ಪಕ್ಷ ಕಟ್ಟಿದ ಅದೇಷ್ಟೋ ನಾಯಕರು ಇನ್ನೂ ಒಂದು ಸೈಕಲ್ ಕೂಡ ತಗೊಂಡಿಲ್ಲ. ನೀವು ಎನೇನೋ ತಗೊಂಡಿದ್ದೀರಿ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಬಿಜೆಪಿಗೆ ಬಂದಿದ್ದು ನಿಮ್ಮಪ್ಪನನ್ನು ( ಯಡಿಯೂರಪ್ಪರನ್ನು) ಸಿಎಂ ಮಾಡಲು, ಅದೇ ಹರಾಮಿ ದುಡ್ಡಲ್ಲಿ ನೀನು ಓಡಾಡುತ್ತಿದೆಯಾ?. ನೀನು ಇನ್ನು ಬಚ್ಚಾ ಇದೀಯಾ. ಒಬ್ಬ ಬಹುಸಂಖ್ಯಾತ ಯತ್ನಾಳ್ ಇದ್ದಾರೆ ಅದಕ್ಕಾಗಿ ಅವರನ್ನು ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ವಿಜಯೇಂದ್ರ ನೀನು ಸಣ್ಣ ಹುಡುಗ, ನಿನಗೆ ಅಧ್ಯಕ್ಷ ಸ್ಥಾನ ನೀಗುವುದಿಲ್ಲ ಎಂದು ಕಿಡಿಕಾರಿದರು.
ಹೈಕಮಾಂಡ್ ಮುಂದುವರಿಸಿದರೆ ಆಗಲಿ. ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ. ನೀನು ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡು. ನೀನು ಸಣ್ಣ ಹುಡುಗ ನೀನು ಏನೂ ಮಾತಾಡಬೇಕು ಗೊತ್ತಾಗಲ್ಲ ಎಂದು ಹರಿಹಾಯ್ದರು.
ನಮ್ಮಲ್ಲಿ ಜಗಳ ಇರುವುದು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಮಾತ್ರ. ಅಧ್ಯಕ್ಷ ಬದಲಾವಣೆ ಆದರೆ ಓಕೆ. ಅದು ಸಾಧ್ಯವಾಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ. ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ. ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಗೂಂಡಾಗಿರಿ ಮಾಡುವ ಮಾತಾಡುವುದನ್ನು ಬಿಡು. ನಮ್ಮ ಮುಂದೆ ಡ್ಯಾಶ್ ಡ್ಯಾಶ್ ಅಂತವರನ್ನು ತಂದು ಯುದ್ದಕ್ಕೆ ನಿಲ್ಲಿಸಿದ್ದಾರೆ. ಪಕ್ಷ ಅಂತಾ ಬಂದಾಗ ಒಂದಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆ ಮಾಡುತ್ತೇವೆ. 2028ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಜಾತಿ ಆಧಾರದ ಮೇಲೆ ನಾನು ರಾಜಕಾರಣ ಮಾಡಿಲ್ಲ. ಕ್ಷೇತ್ರದ ಜನರಿಗೆ ನನ್ನಿಂದ ಏನಾದರೂ ತಪ್ಪಾದರೆ, ಯಾರಿಗಾದರೂ ಏನಾದರೂ ಅಂದಿದ್ದರೆ ಕ್ಷಮಿಸಿ ಎಂದು ಕೋರಿದರು.