ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುತ್ತೇನೆ, ರಾಜಕಾರಣದ ಸುದ್ದಿಗೆ ಬರಬೇಡಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ.29: "ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುತ್ತೇನೆ, ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಲು ಹೋಗಬೇಡಿ" ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಸಿಎಂ, ಡಿಸಿಎಂ ಬದಲಾವಣೆ ವಿಚಾರವಾಗಿ ಲಿಂಗಾಯತ ಸ್ವಾಮೀಜಿಗಳು ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಪದೇ, ಪದೇ ಸ್ವಾಮೀಜಿಗಳ ಮಧ್ಯ ಪ್ರವೇಶದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
"ಪಕ್ಷದ ಹಿತ ದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾನು, ಸಿದ್ದರಾಮಯ್ಯ ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಚಾರವಾಗಿ ಯಾವುದೇ ಸಚಿವರು, ಶಾಸಕರು, ಸ್ವಾಮೀಜಿಗಳು ಮಾತನಾಡುವ ಅವಶ್ಯಕತೆ ಇಲ್ಲ" ಎಂದು ಡಿಕೆಶಿ ಹೇಳಿದರು.
ಹೈಕಮಾಂಡ್ ಬಳಿ ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, "ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಬಳಿ ಚರ್ಚೆಯಾಗಿಲ್ಲ. ಸ್ವಾಮೀಜಿಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ. ಸ್ವಾಮೀಜಿಗಳ ಆಶೀರ್ವಾದ ಇದ್ದರೆ ಸಾಕು. ಅವರು ಒಳಗಿನಿಂದಲೇ ಹರಸಿದರೆ ಸಾಕು. ನಾನು ಸಿಎಂ ಆಗಲು ಯಾರೂ ಶಿಫಾರಸ್ಸು ಮಾಡುವುದು ಬೇಡ. ನಾನು ಮಾಡಿರುವ ಕೆಲಸವನ್ನು ನೋಡಿ ನಮ್ಮ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ದಯವಿಟ್ಟು ಈ ವಿಚಾರ ಇಲ್ಲಿಗೆ ಮುಗಿಸಿಬಿಡಿ" ಎಂದು ಹೇಳಿದರು.