ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ರೈತರ ಸಾಲಮನ್ನಾ : ರಕ್ಷಾ ರಾಮಯ್ಯ
ನೆಲಮಂಗಲ : ‘ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲಮನ್ನಾ ಮಾಡಲಾಗುವುದು’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಂಪುರ, ಸೋಲೂರು ಹೋಬಳಿ ಭಾಗಗಳಲ್ಲಿ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ವೇಳೆ ವಾರ್ಷಿಕ ಎರಡು ಕೋಟಿ ಉದ್ಯೋಗ ನೀಡುವ ವಾಗ್ದಾನ ನೀಡಿತ್ತು. ಆದರೆ, 10 ವರ್ಷಗಳೇ ಕಳೆದರೂ ಈವರೆಗೆ ಒಂದು ಕೋಟಿ ಉದ್ಯೋಗವನ್ನೂ ನೀಡಿಲ್ಲ ಎಂದು ದೂರಿದರು.
ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ, ಸಂವಿಧಾನದ ಆಶಯಗಳ ಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಕಾಂಗ್ರೆಸ್ ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡಿದ್ದು, ಯುವಕನಾದ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ತಮಗೆ ಮತಚಲಾಯಿಸಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಬಿಜೆಪಿ ಸರಕಾರ ರೈತ ವಿರೋಧಿಯಾಗಿದ್ದು, ರೈತರ ಸಾಲಮನ್ನಾ ಮಾಡದೆ ಶ್ರೀಮಂತರ ಸಾಲಮನ್ನಾ ಮಾಡಿದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ರೈತರ ಸಾಲಮನ್ನಾ ಮಾಡಿ ಮಾದರಿಯಾಗಿತ್ತು. ಕಾಂಗ್ರೆಸ್ ರೈತರ ಸಾಲದ ಹೊರೆಯನ್ನು ಇಳಿಸಿ ಕೃಷಿಕರಿಗೆ ನೆಮ್ಮದಿಯ ವಾತಾವರಣ ನಿರ್ಮಿಸಲಿದೆ. ಬಡವರ ಪರ ಕೆಲಸ ಮಾಡದ. ಬಡವರ ವಿರೋಧಿ ಬಿಜೆಪಿ ಸರಕಾರವನ್ನು ತಿರಸ್ಕರಿಸಿ, ಈ ಬಾರಿ ಕಾಂಗ್ರೆಸ್ ಬೆಂಬಲಿಸಿ, ನನಗೆ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಅವರು ಕೋರಿದರು.