ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರಕಿದಲ್ಲಿ, ಜಾತಿ ಹೋರಾಟಗಳು ನಿಲ್ಲುತ್ತದೆ : ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು
ಬೆಂಗಳೂರು : ಪ್ರತಿಯೊಬ್ಬರಿಗೂ ಜಾತಿ, ಧರ್ಮಗಳ ಭೇದವಿಲ್ಲದೆ ಗುಣಮಟ್ಟದ ಶಿಕ್ಷಣ ದೊರಕಿದ್ದಲ್ಲಿ ಜಾತಿ ಹೋರಾಟಗಳು ನಿಲ್ಲುತ್ತದೆ. ಗುಣಮಟ್ಟ ಶಿಕ್ಷಣ ಸಿಗದೇ ಇರುವುದರಿಂದಲೇ ಕೆಲವರ್ಗಗಳ ಜಾತಿ ಜನಾಂಗಗಳಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಸಂಖ್ಯೆ ಹೆಚ್ಚಾಗಿರುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರೆ ಸೌಲಭ್ಯಗಳು ದೊರಕಬೇಕು. ಆದರೆ, ಈಗಿನ ರಾಜಕೀಯ ಪಕ್ಷಗಳು ಇದು ಯಾವುದನ್ನೂ ಮಾಡದೇ ಜಾತಿ, ಧರ್ಮದ ಮೇಲೆ ವೋಟ್ ರಾಜಕಾರಣ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿರುವುದನ್ನು ನೋಡಬಹುದು ಎಂದು ಹೇಳಿದ್ದಾರೆ.
ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಸಂವಿಧಾನದ ಮೂಲ ಆಶಯದಂತೆ ನಡೆದುಕೊಂಡಿರುವುದರ ಪರಿಣಾಮವಾಗಿ ಆ ರಾಜ್ಯಗಳಲ್ಲಿ ಜಾತಿ ಜನಾಂಗಗಳ ಹೋರಾಟಗಳು, ಕಲಹಗಳು ನಡೆಯುವುದಿಲ್ಲ. ಕರ್ನಾಟಕ ರಾಜ್ಯದ ರಾಜಕಾರಣಿಗಳು ವೋಟ್ ರಾಜಕಾರಣ ಮುಂದುವರಿಸಲು ಜಾತಿಯ ಮುಖವಾಡಗಳನ್ನಿಟ್ಟುಕೊಂಡು ತಾವೇ ಹೋರಾಟಗಳ ನೇತೃತ್ವವನ್ನು ವಹಿಸಿಕೊಂಡಿರುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿರುವ ಮೂರು ಪಕ್ಷಗಳು ಅಧಿಕಾರದಲ್ಲಿದ್ದಾಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ವರದಿ ಮುಚ್ಚಿಟ್ಟು, ಜಾತಿ ಹೋರಾಟಗಳ, ಸಂಘರ್ಷ-ಕಲಹಗಳ ಮೂಲಕ ವೋಟ್ ಬ್ಯಾಂಕನ್ನು ಹೆಚ್ಚಿಸಿಕೊಳ್ಳಬಹುದೆಂಬ ನೀತಿಯಿಂದಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವ ಘಟನೆಗಳು ಮರುಕಳಿಸುತ್ತಲಿವೆ. ರಾಜ್ಯ ಸರಕಾರ ಯಾವುದೇ ಹೋರಾಟಗಾರರ ಮೇಲೆ ದಬ್ಬಾಳಿಕೆಯ ಹಾಗೂ ದಮನಕಾರಿ ನೀತಿಯನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.