ಯೋಗ್ಯರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿ ಗೌರವ ಹೆಚ್ಚಳ : ನ್ಯಾ.ಶಿವರಾಜ್ ಪಾಟೀಲ್
ಬೆಂಗಳೂರು : ಯೋಗ್ಯರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಗೌರವ ಹೆಚ್ಚುತ್ತದೆ. ಅನರ್ಹರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿಗಳಿಗೆ ಅವಮಾನ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್.ವಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಟಾನದ ವತಿಯಿಂದ ನೀಡುವ ಸಂಸ್ಕೃತಿ ಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಸಾಧಕನ ಸಾಧನೆಯನ್ನು ಇದು ಸಂಭ್ರಮಿಸುವ ಸಮಾರಂಭವಾಗಿದೆ. ಸಮಾಜ ಮತ್ತು ಸರಕಾರ ಸಾಧಕರನ್ನು ಗೌರವಿಸಬೇಕು. ಅದರಿಂದ ಉದಯೋನ್ಮೂಖ ಸಾಧಕರಿಗೆ ಪ್ರೇರಣೆಯಾಗುತ್ತದೆ. ಸಾಧಕರ ಸಾಧನೆಯ ಹಿಂದೆ ಪರಿಶ್ರಮ ಇರುತ್ತದೆ ಎಂದು ತಿಳಿಸಿದರು.
ಕಲಾವಿದರು, ಸಾಹಿತಿಗಳು, ಸೇರಿ ಎಲ್ಲ ಕ್ಷೇತ್ರದ ಸಾಧಕರು ಅನಾರೋಗ್ಯದಲ್ಲಿ ಅಥವಾ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ, ಅವರು ಸರಕಾರ, ಸಮಾಜದ ಸಹಾಯ ಮತ್ತು ಸಹಕಾರ ಮಾಡಬೇಕು. ಅದೇ ದೊಡ್ಡ ಪ್ರಶಸ್ತಿಯಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಸಾಹಿತಿಗಳಾದ ದೊಡ್ಡ ರಂಗೇಗೌಡ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಪುಲ್ಲೇಪುರಂ ಜಿ.ವೆಂಕಟೇಶ್, ಪರಿಸರವಾದಿ ಎ.ಎನ್.ಯಲ್ಲಪ್ಪ ರೆಡ್ಡಿ, ರಂಗಕರ್ಮಿ ಸಿ.ಬಸವಲಿಂಗಯ್ಯ, ಸಂಗೀತಗಾರ್ತಿ ಡಾ.ಜಯಶ್ರೀ ಅರವಿಂದ್, ಆರ್.ಕೆ.ಶೆಟ್ಟಿ ಅವರಿಗೆ ಸಂಸ್ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ, ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ವೇಮಗಲ್ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.