ಸಿಎಂ ಪತ್ನಿ ಅಲ್ಲದ್ದಿದ್ದರೆ ವಿಜಯನಗರ ಬಡಾವಣೆಯಲ್ಲಿ ನಿವೇಶನ ಸಿಗುತ್ತಿತ್ತೇ? : ಸಿ.ಟಿ.ರವಿ ಪ್ರಶ್ನೆ

ಸಿ.ಟಿ.ರವಿ
ಬೆಂಗಳೂರು : ಮುಖ್ಯಮಂತ್ರಿಯವರ ಪತ್ನಿ ಅಲ್ಲದ್ದಿದ್ದರೆ 30 ವರ್ಷಗಳಷ್ಟು ಹಿಂದೆ ಅಭಿವೃದ್ಧಿ ಹೊಂದಿದ ವಿಜಯನಗರ ಬಡಾವಣೆಯಲ್ಲಿ ನಿವೇಶನ ಸಿಗುತ್ತಿತ್ತೇ? ಎಂಬುದು ನನ್ನ ಮೂಲಭೂತ ಪ್ರಶ್ನೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದ ʼಜಗನ್ನಾಥ ಭವನʼದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಧ್ಯಮ ವರದಿಗಳನ್ನು ಗಮನಿಸಿ ಹೇಳುವುದಾದರೆ, ಮುಡಾದಲ್ಲಿ ಅಕ್ರಮ ನಡೆದಿರುವುದು ನಿಜವೆಂದು ಕಾಂಗ್ರೆಸ್ ಪಕ್ಷ ಸೇರಿ ಬಹುತೇಕ ಎಲ್ಲ ಪಕ್ಷಗಳೂ ಒಪ್ಪಿಕೊಂಡಿವೆ. ಯಾರು ಮಾಡಿದ್ದಾರೆ, ಯಾರ ಕಾಲಘಟ್ಟದಲ್ಲಿ ಆಗಿದೆ? ಯಾರು ಲಾಭ ಪಡೆದಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಬೇಕಿದೆ ಎಂದು ತಿಳಿಸಿದರು.
ಪ್ರಾಸ್ಪೆಕ್ಟಿವ್ ಮತ್ತು ರೆಟ್ರೋಸ್ಪೆಕ್ಟಿವ್ ನಡುವೆ ಹಿಂದೆ ವಶಪಡಿಸಿಕೊಂಡ ಜಮೀನಿಗೂ ಶೇ.50ರಷ್ಟು ನಿವೇಶನ ಕೊಡುವಂತೆ ಎಲ್ಲೂ ಆದೇಶ ಆಗಿರಲಿಲ್ಲ. ಆದರೆ, ನಿವೇಶನ ಕೊಟ್ಟಿದ್ದು ಅಕ್ರಮವಲ್ಲವೇ? ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಹೇಗಿಲ್ಲವೋ ಮುಡಾದ ಹಗರಣಕ್ಕೂ ಕನ್ನಡಿ ಹಿಡಿಯಬೇಕಾದ ಅವಶ್ಯಕತೆ ಇಲ್ಲ ಎಂದು ವಿಶ್ಲೇಷಿಸಿದರು.
ಎಲ್ಲ ಪಕ್ಷಗಳೂ ಹಗರಣ ನಡೆದುದಾಗಿ ಹೇಳಿವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಲ್ಲವೇ? ಈಡಿ 142 ಸೈಟ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಲೋಕಾಯುಕ್ತ ಹಾಗೆ ಮಾಡಿಲ್ಲವೇಕೆ? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ದೂರು ಬಂದ ನಂತರವೂ, ಜಿಲ್ಲಾಧಿಕಾರಿ ಪತ್ರ ಬರೆದ ಬಳಿಕವೂ ಕೂಡ ಯಾಕೆ ಅವರು ಕ್ರಮ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆಗೆ ಏನು ಉತ್ತರ ಕೊಡುತ್ತಾರೆ? ಯಾವುದೋ ಪ್ರಭಾವಶಾಲಿ ಶಕ್ತಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಂತೆ ತಡೆದಿತ್ತು ಎಂಬುದಕ್ಕೆ ಇನ್ನೇನು ಸಾಕ್ಷಿಬೇಕು ಎಂದು ಕೇಳಿದರು. ಯಾರ ಮೇಲೆ ಆಪಾದನೆ ಬಂತೋ ಅವರಿಗೆ ಬಡ್ತಿ, ಆಯಕಟ್ಟಿನ ಹುದ್ದೆ ಕೊಡುವುದೇ ಆದರೆ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಮಾಡುವ ಶಕ್ತಿ ಯಾವುದು ಎಂಬುದಕ್ಕೆ ದುರ್ಬೀನು ಹಾಕಿ ಹುಡುಕಬೇಕೇ ಎಂದು ಪ್ರಶ್ನೆ ಮಾಡಿದರು.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ? ಇಲ್ಲವಾದರೆ ಕಾನೂನು- ಸಂವಿಧಾನಕ್ಕೆ ಬೆಲೆ ಇಲ್ಲದಂತಾಗುತ್ತದೆ. ಅಕ್ರಮ ಮಾಡಿದವರು, ತಪ್ಪೆಸಗಿದವರಿಗೆ ಶಿಕ್ಷೆ ಆಗಲಿ. ಅಕ್ರಮ ಆಗಿದನ್ನು ಮುಟ್ಟುಗೋಲು ಹಾಕಿಕೊಳ್ಳಲಿ. ಆಗ ಎಚ್ಚರಿಕೆ ಆಗುತ್ತದೆ. ಇಲ್ಲವಾದರೆ ಅಕ್ರಮ ನಡೆಸಿದವರೇ ಸರದಾರರಾಗಿ ಮೆರೆಯುವುದು ಆಗಿಬಿಟ್ಟರೆ ಎಂದು ಅವರು ಪ್ರಶ್ನಿಸಿದರು.