ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ : ಡಾ.ಜಿ.ರಾಮಕೃಷ್ಣ
ಬೆಂಗಳೂರು: ಸಂವಿಧಾನ ಉಳಿದರೆ, ನಾವು ಉಳಿಯುತ್ತೇವೆ. ಸಂವಿಧಾನ ಇಲ್ಲದಿದ್ದರೆ ನಾವು ಇರುವುದಿಲ್ಲ. ಅದಕ್ಕಾಗಿ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲ ನಾಗರಿಕರು ಕೆಲಸ ಮಾಡಬೇಕಾಗಿದೆ ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಕರೆ ನೀಡಿದ್ದಾರೆ.
ಗುರುವಾರ ಜಯನಗರದಲ್ಲಿ ಜಾಗೃತ ನಾಗರಿಕರು-ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ ‘ಸಂವಿಧಾನ ಉಳಿಸಿ’ ಜಾಗೃತ ನಡಿಗೆಯಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಇರುವ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವವನ್ನು ಎಲ್ಲರಲ್ಲೂ ಮೂಡಿಸಬೇಕಾಗಿದೆ. ರಾಮನ ಮೇಲೆ ಬೆಳಕು ಬೀಳುವುದು ಎಲ್ಲರಿಗೂ ಗೊತ್ತಿದೆ. ಯಾವುದು ಆಕಸ್ಮಿಕವಲ್ಲ ಅದು ವೈಜ್ಞಾನಿಕ ಎಂದು ಅಭಿಪ್ರಾಯಪಟ್ಟರು.
ಸಂವಿಧಾನಕ್ಕೆ ಇಂದು ಅಪಚಾರ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ಸಮಾನತೆ ಇದೆ. ಆದರೆ ಮದುವೆಯ ಸಮಯದಲ್ಲಿ ದಲಿತ ವ್ಯಕ್ತಿ ಕುದುರೆ ಮೇಲೆ ಕುಳಿತು ಹೋಗಿದ್ದಕ್ಕಾಗಿ ಅವನ ಮೇಲೆ ಹಲ್ಲೆ ಮಾಡಲಾಗಿದೆ. ಹಾಗು ಸ್ನಾನ ಮಾಡಲು ಕೆರೆಗೆ ಹೋದ ಚಿಕ್ಕ ಹುಡುಗಿಗೆ ಹೊಡೆಯಲಾಗಿದೆ. ದೇಶದಲ್ಲಿ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಬ್ರಿಟೀಷರ ಕಾಲದಲ್ಲಿ ಹರಿದು ಹಂಚಿಹೋಗಿದ್ದ ದೇಶವನ್ನು ಒಂದುಗೂಡಿಸಿದ್ದು ಸಂವಿಧಾನವಾಗಿದೆ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಸಂವಿಧಾನವೆಂಬ ತಾಯಿ ಇದ್ದಾಳೆ. ನಾವು ಎಚ್ಚರಿಕೆಯಿಂದ ಇಲ್ಲದಿದ್ದಕ್ಕಾಗಿ ನಮ್ಮ ವಿರೋಧಿಗಳು ಎಚ್ಚರದಿಂದ ಇದ್ದಾರೆ. ಅದಕ್ಕಾಗಿ ನಾವು ಎಚ್ಚರಗೊಂಡು ಸಂವಿಧಾನವನ್ನು ಕಪಿಮುಷ್ಠಿಯಿಂದ ಬಿಡುಗಡೆ ಮಾಡಬೇಕು ಎಂದು ಡಾ.ಜಿ.ರಾಮಕೃಷ್ಣ ನುಡಿದರು.
ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ನಮ್ಮದು ಸಾಮಾಜಿಕ, ರಾಜಕೀಯ ಸ್ವಾಸ್ಥ್ಯ ಕಾಪಾಡುವ ಸಂವಿಧಾನ. ಇತ್ತೀಚಿಗೆ ಪ್ರಧಾನಿ ಮೋದಿ ಅಂಬೇಡ್ಕರ್ ಬಂದು ಹೇಳಿದರೂ ಸಂವಿಧಾನ ಬದಲಿಸಲು ಆಗುವುದಿಲ್ಲ ಎಂದು ಹೇಳಿದ್ದರು. ಯಾಕೆ ಹೇಳಿದರು ಗೊತ್ತಿಲ್ಲ. ಅದೇ ಪಕ್ಷದ ಹೇಳುತ್ತಾರೆ ಪೂರ್ಣ ಬಹುಮತ ನೀಡಿದರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು, ಅದಕ್ಕಾಗಿ ಜನರು ಯಾವುದೇ ಗೊಂದಲಕ್ಕೆ ಒಳಗಾಗದೇ ಸಂವಿಧಾನದ ಆಶಯವಾದ ಸ್ವಾತಂತ್ರ್ಯ ಸಮಾನತೆಯನ್ನು ಉಳಿಸಿಕೊಳ್ಳಲು ಎಲ್ಲರೂ ಒಂದಾಗಬೇಕು. ಬೆಂಗಳೂರಿನ ಜನರನ್ನು ಬುದ್ಧಿವಂತರು ಎಂದು ಹೇಳುತ್ತಾರೆ. ಆದರೆ ಕಡಿಮೆ ಮತದಾನವಾಗುವುದು ಬೆಂಗಳೂರಿನಲ್ಲೆ, ಪ್ರಜಾಪ್ರಭುತ್ವ ಉಳಿಯಲು ದೇಶದ ದುಡಿಯುವ ವರ್ಗ ಕಾರಣವಾಗಿದೆ ಎಂದು ಹೇಳಿದರು.
ಇದೇ ವೇಳೆ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಸಂವಿಧಾನ ಪೀಠಿಕೆ ಬೋಧಿಸಿದರು. ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್, ಡಾ.ವಿಜಯಾ, ಶ್ರೀಪಾದ ಭಟ್, ಲೇಖಕಿ ಡಾ.ಕೆ.ಶರೀಫಾ, ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ.ವಿ.ಪಿ, ಮಲ್ಲು ಕುಂಬಾರ ಮತ್ತಿತರರು ಉಪಸ್ಥಿತರಿದ್ದರು.
‘ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ ಪಕ್ಷದವರೇ ಯಾರಿಂದಲೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿ ಗೊಂದಲ ಉಂಟು ಮಾಡುತಿದ್ದಾರೆ. ಅದಕ್ಕೆ ಕಾರಣ ಈಗಿರುವ ಚುನಾವಣೆ. ದೇಶವನ್ನೂ ಈಗಾಗಲೇ ಅಧೋಗತಿಗೆ ತರಲಾಗಿದೆ. ಅಂತವರನ್ನು ಸೋಲಿಸಿ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ. ಸಂವಿಧಾನವೇ ನಮ್ಮ ಧರ್ಮವಾಗಿದೆ. ಚುನಾವಣೆ ಮುಗಿಯುವ ವರೆಗೂ ಈ ರೀತಿಯ ಜಾಥಾ ನಡೆಯಬೇಕಾಗಿದೆ’
ಜಾಣಗೆರೆ ವೆಂಕಟರಾಮಯ್ಯ, ಹಿರಿಯ ಪತ್ರಕರ್ತ
‘ಪ್ರಜಾಪ್ರಭುತ್ವ ಮತ್ತು ಸಂವಿಧಾನ ಆತಂಕದಲ್ಲಿವೆ. ಸಂವಿಧಾನವನ್ನು ಬದಲಾಯಿಸುವ ಮಾತನಾಡುವ ಈ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಯೋಚನೆ ಮಾಡಬೇಕಾಗಿದೆ. ದೇಶದಲ್ಲಿ ಬಹುಭಾಷೆ, ಬಹು ಧರ್ಮ, ಬಹು ಸಂಸ್ಕೃತಿಗಳಿದ್ದು, ಜಾತ್ಯತೀತ ಮನೋಭಾವದಲ್ಲಿ ನಂಬಿಕೆ ಇಡಲಾಗಿದೆ. ದೇಶದ ಬಹುತ್ವಕ್ಕೆ ಸಂವಿಧಾನ ಮಾದರಿಯಾಗಿದ್ದು, ಪ್ರಜಾಪ್ರಭುತ್ವವನ್ನೂ ರಕ್ಷಿಸುವ ಕೆಲಸ ಮಾಡಬೇಕು. ಪಕ್ಷಾತೀತ ನೆಲೆಯೊಳಗೆ ಸಂವಿಧಾನವನ್ನು ಉಳಿಸಬೇಕು ಇದು ನಮ್ಮ ಗುರಿಯಾಗಿದೆ. ಎಲ್ಲ ಜನರು ಎಚ್ಚೆತ್ತು ಜನರು ಸಂವಿಧಾನವನ್ನು ರಕ್ಷಿಸುವವರಿಗೆ ಮತ ನೀಡಬೇಕು.
ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ