ಕೆಲವರಿಂದ ಯತ್ನಾಳ್ ಹೆಗಲ ಮೇಲೆ ಗನ್ ಇಟ್ಟು ಗುಂಡು ಹೊಡೆಯುವ ಪ್ರಯತ್ನ: ವಿಜಯೇಂದ್ರ
"ಹೊಂದಾಣಿಕೆ ರಾಜಕಾರಣದ ದಾಖಲೆಗಳಿದ್ದಲ್ಲಿ ತಕ್ಷಣ ಬಿಡುಗಡೆ ಮಾಡಲಿ"
ಬೆಂಗಳೂರು: ಕೆಲವರು ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಅವರ ಹೆಗಲ ಮೇಲೆ ಗನ್ ಇಟ್ಟು ಗುಂಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ರವಿವಾರ ಮಾಧ್ಯಮದರ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರದ ವೈಫಲ್ಯ, ಮುಡಾ ಅಕ್ರಮ, ವಾಲ್ಮೀಕಿ ನಿಗಮದ ಹಗರಣ ಮುಂದಿಟ್ಟು ಹೋರಾಟ ಸಂಘಟಿಸಿ ಸರಕಾರವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ನಮ್ಮ ಕೆಲವು ಮುಖಂಡರು ತಮ್ಮ ವೈಯಕ್ತಿ ಹಿತಾಸಕ್ತಿಯನ್ನು ಮುಂದಿಟ್ಟು ಬಿ.ಎಸ್.ಯಡಿಯೂರಪ್ಪರ ಬಗ್ಗೆ, ತನ್ನ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ. ಇದ್ಯಾವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಬಿಜೆಪಿ ಭಿನ್ನರ ಬಣಕ್ಕೆ ಕಿವಿಮಾತು ಹೇಳಿದರು.
ಉಪ ಚುನಾವಣೆಯ ಸೋಲಿನ ಬಳಿಕ ಪಕ್ಷದ ಕಾರ್ಯಕರ್ತರು ತೀವ್ರವಾಗಿ ನೊಂದಿದ್ದಾರೆ. ಚಳಿಗಾಲದ ಅಧಿವೇಶನ ಶುರುವಾಗಲಿದೆ. ಈ ಅವಧಿಯಲ್ಲಿ ಪಕ್ಷ ಒಗ್ಗಟ್ಟಿನಿಂದ ಮುಂದೆ ಸಾಗಬೇಕಿದೆ. ಆದರೆ ಕೆಲವರಿಗೆ ಇದು ಅರ್ಥವೇ ಆಗುತ್ತಿಲ್ಲ. ದಿನ ನಿತ್ಯ ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರುದ್ಧ ಹಾದಿಬೀದಿಯಲ್ಲಿ ಬೈಯುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಅದರಿಂದ ಅವರಿಗೆ ದೊಡ್ಡ ಪದವಿ ಸಿಗಲಿದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಹೊಂದಾಣಿಕೆ ರಾಜಕಾರಣದ ದಾಖಲೆಗಳಿದ್ದಲ್ಲಿ ತಕ್ಷಣ ಬಿಡುಗಡೆ ಮಾಡಿ
ವಿಜಯೇಂದ್ರ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಈ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಯತ್ನಾಳ್ ಹೇಳಿಕೆ ಬಗ್ಗೆ ಗಮನಸೆಳೆದಾಗ ಪ್ರತಿಕ್ರಿಯಿಸಿದ ವಿಜಯೇಂದ್ರ, ಒಂದು ಕ್ಷಣನೂ ತಡ ಮಾಡಬೇಡಿ, ಹೊಂದಾಣಿಕೆ ರಾಜಕಾರಣದ ಯಾವುದೇ ದಾಖಲೆ, ವೀಡಿಯೋಗಳಿದ್ದಲ್ಲಿ ಯತ್ನಾಳ್ ತಕ್ಷಣ ಬಿಡುಗಡೆ ಮಾಡಬೇಕು. ಶುಭ ಮುಹೂರ್ತಕ್ಕೆ ಕಾಯುವುದು ಬೇಡ ಎಂದು ಸವಾಲು ಹಾಕಿದರು.
ಪಕ್ಷದ ಕೆಲವು ಮುಖಂಡರು "ಯಡಿಯೂರಪ್ಪ, ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ" ಎಂದು ಪದೇ ಪದೇ ಹೇಳಿ ಪಕ್ಷ ಸಂಘಟನೆಗೆ ಪೆಟ್ಟು ಕೊಡುತ್ತಿದ್ದಾರೆ. ಇದನ್ನು ಪಕ್ಷದ ಕಾರ್ಯಕರ್ತರು ಮೆಚ್ಚುವುದಿಲ್ಲ. ದೇವರು ಕೂಡಾ ಅವರನ್ನು ಮೆಚ್ಚಲಾರ ಎಂದು ವಿಜಯೇಂದ್ರ ಹೇಳಿದರು.
ಪಕ್ಷ ಸಂಘಟನೆಗೆ ಅಡ್ಡಿಯುಂಟು ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಅಪೇಕ್ಷೆ ಇದೆ
ಯಾರು ಹಾದಿಬೀದಿಯಲ್ಲಿ ಮಾತನಾಡುತ್ತಾ ಪಕ್ಷ ಸಂಘಟನೆಗೆ ಅಡ್ಡಿಯುಂಟು ಮಾಡುತ್ತಿರುವವರ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಕಾರ್ಯಕ್ರತರು ಒತ್ತಾಯಿಸುತ್ತಿದ್ದಾರೆ. ದಿಲ್ಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾದ ವೇಳೆ ಯತ್ನಾಳ್ ವಿರುದ್ಧ ಚಾಡಿ ಹೇಳಿಲ್ಲ. ಅದರ ಅಗತ್ಯವೂ ತನಗಿಲ್ಲ ಎಂದರು.
ನಾಯಕತ್ವ ಬದಲಾವಣೆಯ ಒತ್ತಾಯದ ಬಗ್ಗೆ ಮಾಧ್ಯಮದರು ಗಮನಸೆಳೆದಾಗ ಪ್ರತಿಕ್ರಿಯಿಸಿದ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸುವ ಪ್ರಯತ್ನವನ್ನು ಯತ್ನಾಳ್ ಮಾಡಲಿ. ಅದಕ್ಕಾಗಿ ಇನ್ನಷ್ಟು ಜನರನ್ನು ಸೇರಿಸಿಕೊಳ್ಳಲಿ, ನನಗೇನು ತೊಂದರೆ ಇಲ್ಲ ಎಂದರು.