ಭೂಮಿಯ ಸಂಬಂಧ ಮಾತನಾಡಿದರೆ ನಕ್ಸಲ್ ಎಂದು ಕೊಲ್ಲುತ್ತಾರೆ : ಪ್ರೊ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ಯಾರಾದರೂ ಭೂಮಿಯ ಸಂಬಂಧ ಮಾತನಾಡಿದರೆ ತಕ್ಷಣ ಅವರನ್ನು ನಕ್ಸಲ್ ಎಂದು ನಾಮಕರಣ ಮಾಡಿ ಕೊಂದು ಹಾಕುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಜನಶಕ್ತಿ ವತಿಯಿಂದ ಹಮ್ಮಿಕೊಂಡಿದ್ದ ಶೋಷಿತ ಸಮುದಾಯಗಳ ಮಂಥನಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಮಿತಿಗಳ ನಡೆಯುವೆಯೂ ನಕ್ಸಲರು ಭೂಮಿಯ ಸಂಬಂಧ ಎತ್ತಿರುವ ಸಮಸ್ಯೆಗಳು ಅದು ಸಾಮಾಜಿಕ ಸಮಸ್ಯಗಳೇ ಆಗಿದೆ. ಅದರ ಅರ್ಥ ನಕ್ಸಲರನ್ನು ಬೆಂಬಲಿಸಿ ಅವರ ಜೊತೆಗೆ ಹೋಗುತ್ತೇನೆ ಎಂದು ಅಲ್ಲ. ಅವರು ಎತ್ತಿರುವ ಭೂಮಿ ಹಂಚುವಿಕೆಯ ಸಮಸ್ಯೆ ದೇಶದಲ್ಲಿರುವ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಭೂ ಮಸೂದೆ ಜಾರಿಗೊಳಿಸಿದರು ಎನ್ನುತ್ತೇವೆ. ಇಂದು ಭಾರತದ ಶೇ.7ರಷ್ಟು ಜನರಲ್ಲಿ ಶೇ.47ರಷ್ಟು ಭೂಮಿ ಇದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಭೂ ಮಸೂದೆ ಇನ್ನೂ ಜಾರಿಗೆ ಬಂದಿಲ್ಲ. ರಾಜ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.68ರಷ್ಟು ಭೂ ಮಸೂದೆ ಜಾರಿಗೆ ಬಂದಿದೆ. ಉಳಿದ ಕಡೆ ಏನಾಯಿತು ಎನ್ನುವುದು ಒಂದು ಪ್ರಶ್ನೆ ಮತ್ತು ಭೂ ಮಸೂದೆ ಜಾರಿಗೆ ಬರುತ್ತದೆ ಎಂದು ಗೊತ್ತಾದ ಕೂಡಲೆ ಜನರನ್ನು ಒಕ್ಕಲೆಬ್ಬಿಸಿ ಊರಿಂದ ಹೊರಗೆ ಕಳಿಸಿದವರ ಸಂಖ್ಯೆ ಎಷ್ಟು ಎನ್ನುವುದರ ಮಾಹಿತಿ ನಮಗೆ ತಿಳಿದಿಲ್ಲ ಎಂದು ಪುರುಷೋತ್ತಮ್ ಬಿಳಿಮಲೆ ಹೇಳಿದರು.
ಪ್ರಜಾಪ್ರಭುತ್ವದ ರೀತಿಯಲ್ಲಿ ಭೂಮಿ ಪುನರ್ ವಿತರಣೆಯ ಬಗ್ಗೆ ಗಂಭೀರವಾದ ಹೋರಾಟಗಳನ್ನು ರೂಪಿಸಬೇಕಿದೆ. ದೇಶದಲ್ಲಿ ಶೇ.13ರಷ್ಟು ಮಹಿಳೆಯರು ಮಾತ್ರ ಭೂಮಿ ಹೊಂದಿದ್ದಾರೆ. ಹಾಗಾದರೆ ಮಹಿಳಾ ಪರ ಕಾನೂನುಗಳು ಏನಾದವು? ಶೇ.73ರಷ್ಟು ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಶೇ.54ರಷ್ಟು ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಭೂಮಿ ಸಂಬಂಧಗಳು ಹೇಗಿದೆ ಎನ್ನುವುದನ್ನು ಗಂಭೀರವಾಗಿ ಹೊಸರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಭಾರತದ ಅತಿ ದೊಡ್ಡ ಸಮಸ್ಯೆ ಎಂದರೆ ಭೂಮಿ ಹಂಚಿಕೆಯ ಸಮಸ್ಯೆ. ಅದನ್ನು ಮಾತಿನಲ್ಲಿ ಹೇಳುತ್ತೇವೆಯೇ ಹೊರತು, ಹೋರಾಟದ ರೂಪಿನಲ್ಲಿ ತರುತ್ತಿಲ್ಲ ಎಂದು ಅವರು ಹೇಳಿದರು.
1992ರ ನಂತರ ಬಂದ ಜಾಗತಿಕರಣ, 2008ರ ನಂತರ ಜಾರಿಗೆ ಬಂದ ಭೂಷಣ ಪಟ್ಟವರ್ಧಿ ಕಮಿಟಿ, 2020ರ ನಂತರ ಜಾರಿಗೆ ಬಂದ ಎನ್‍ಇಪಿಯಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಸಂಪೂರ್ಣ ಅಪ್ರಸ್ತತವಾಗಿದೆ. ಹಾಗಾಗಿ ನಮ್ಮ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯ ತರುವ ಬಗೆ ಹೇಗೆ? ಶೋಷಿತ ಸಮುದಾಯ ಶಿಕ್ಷಣ ಕ್ರಮದಿಂದ ಸಂಪೂರ್ಣ ದೂರವಾಗಿದೆ. ಇದಕ್ಕೆ ಪೂರಕವಾಗಿರುವುದು ಇನ್ನೊಂದು ಮೀಸಲಾತಿ ಸಮಸ್ಯೆ ಎಂದು ಪುರುಷೋತ್ತಮ್ ಬಿಳಿಮಲೆ ತಿಳಿಸಿದರು.
ಕಾರ್ಯಕ್ರಮದಲ್ಲಿ ದಸಂಸ ಹಿರಿಯ ಮುಖಂಡ ಎನ್.ವೆಂಕಟೇಶ್, ಕರ್ನಾಟಕ ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ಸರೋವರ್ ಬೆಂಕಿಕೆರೆ, ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯಾಧ್ಯಕ್ಷ ಮರಿಯಪ್ಪ, ಕರ್ನಾಟಕ ಜನಶಕ್ತಿಯ ಗೌರಿ, ಕರಿಯಪ್ಪ ಗುಡಿಮನಿ, ವೆಂಕಟೇಶ್ ಹಾಗಲಗಂಚಿ, ಆದಿವಾಸಿ ಹೋರಾಟಗಾರ ಮುತ್ತಯ್ಯ, ಪ್ರಾಧ್ಯಾಪಕಿ ಡಾ.ಕೆ.ವಿ.ನೇತ್ರಾವತಿ, ಅಲೆಮಾರಿ ಸಮುದಾಯಗಳ ಒಕ್ಕೂಟ ರಾಜ್ಯಧ್ಯಕ್ಷ ವೆಂಕಟರಮಣಯ್ಯ, ಒಳಮೀಸಲಾತಿ ಹೋರಾಟ ಸಮಿತಿ ಬಸವರಾಜ್ ಕೌತಾಳ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಕ್ಫ್ ವಿಚಾರದಲ್ಲಿ ತುಂಬಾ ಚರ್ಚೆಗಳಾಯಿತು. ಅದನ್ನು ರಾಜ್ಯದಲ್ಲಿ ನಡೆದ ಉಪಚುನಾವಣೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಚುನಾವಣಾ ವಿಷಯವಾಯಿತು. ವಕ್ಫ್ ಬಗ್ಗೆ ಇಷ್ಟು ದೊಡ್ಡದಾಗಿ ಮಾತನಾಡುವ ನಾವು, ಸುಮಾರು ಶೇ.57ರಷ್ಟು ಶೋಷಿತರಿಗೆ ಜಮೀನು ಇಲ್ಲ ಎನ್ನುವುದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಇದೆಂತ ವೈರುದ್ಯ. 2014ರಿಂದ ಈ ದೇಶದಲ್ಲಿ ಆರೆಸ್ಸೆಸ್‌ನವರು ಹೊಂದಿರುವ ಭೂಮಿ ಎಷ್ಟು ಎನ್ನುವುದರ ಬಗ್ಗೆ ಯಾರು ಮಾತನಾಡುತ್ತಿಲ್ಲ.
-ಪುರುಷೋತ್ತಮ್ ಬಿಳಿಮಲೆ, ಅಧ್ಯಕ್ಷ ಕನ್ನಡ ಅಭಿವೃದ್ದಿ ಪ್ರಾಧಿಕಾರ