‘ಸಿ’ ವರ್ಗದ ದೇವಾಲಯಗಳಿಗೆ ಅನುದಾನ ಹೆಚ್ಚಿಸಿ: ಸಿಎಂಗೆ ಸಚಿವ ರಾಮಲಿಂಗಾರೆಡ್ಡಿ ಮನವಿ

ರಾಮಲಿಂಗಾರೆಡ್ಡಿ
ಬೆಂಗಳೂರು : ಮುಜರಾಯಿ ಇಲಾಖೆ ವ್ಯಾಪ್ತಿಯ ‘ಸಿ’ ವರ್ಗದ ದೇವಾಲಯಗಳಿಗೆ ಹೆಚ್ಚು ಅನುದಾನ ನೀಡಬೇಕು. ಜೊತೆಗೆ ‘ತಸ್ತಿಕ್’ ಹಣ ಹೆಚ್ಚಳ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದೇನೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೋಮವಾರ ಸಿಎಂ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಜರಾಯಿ ಇಲಾಖೆ ಮತ್ತು ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಹಲವು ಬೇಡಿಕೆ ಇಟ್ಟಿದ್ದೇನೆ. ತಸ್ತಿಕ್ ಹಣ ಹೆಚ್ಚು ಮಾಡಲು ಸಿಎಂಗೆ ಬೇಡಿಕೆ ಇಟ್ಟಿದ್ದೇವೆ ಎಂದರು.
ಮುಜರಾಯಿ ಇಲಾಖೆಗೆ ಹೆಚ್ಚು ಅನುದಾನ ನೀಡಬೇಕು. ‘ಸಿ’ ವರ್ಗದ ದೇವಸ್ಥಾನಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು. ಕಾಶಿಯಲ್ಲಿ ಇದ್ದ ಕಟ್ಟಡ ಬಿದ್ದು ಹೋಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡಬೇಕೆಂದು ಮನವಿ ಮಾಡಿದ್ದೇನೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
ಸಾರಿಗೆ ಇಲಾಖೆ ಸಂಬಂಧ ಹೊಸದಾಗಿ 3,500 ಬಸ್ ಖರೀದಿ ಅವಶ್ಯಕತೆ ಇದೆ. 15 ವರ್ಷಗಳ ಕಾಲ ಚಲಿಸಿರುವ ಬಸ್ಗಳನ್ನು ಬದಲಾವಣೆ ಮಾಡಬೇಕು. ಹೀಗಾಗಿ ಹಣ ಕೊಡಬೇಕು. ವಾಯುವ್ಯ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಬಿಜೆಪಿ ಅವಧಿಯಲ್ಲಿ ಇದ್ದ ಸಾಲಗಳನ್ನು ತೀರಿಸಲು ಸಹಾಯ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಕೂಡಾ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಏನಾಗುತ್ತದೆಂದು ಬಜೆಟ್ನಲ್ಲಿ ನೋಡೋಣ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.