ಇನ್ವೆಸ್ಟ್ ಕರ್ನಾಟಕ-2025 | ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರ : ಎಂ.ಬಿ.ಪಾಟೀಲ್

ಬೆಂಗಳೂರು : ‘ಇನ್ವೆಸ್ಟ್ ಕರ್ನಾಟಕ-2025 ಸಮಾವೇಶ’ವು ಕರ್ನಾಟಕವನ್ನು ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ನಾವೀನ್ಯತೆ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ರವಿವಾರ ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಇನ್ವೆಸ್ಟ್ ಕರ್ನಾಟಕ 2025ಕ್ಕೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಸರಕಾರವು ಸಜ್ಜಾಗಿದ್ದು, ಫೆ.11ರಂದು ಮಧ್ಯಾಹ್ನ ನಡೆಯಲಿರುವ ಉದ್ಘಾಟನಾ ಸಮಾರಂಭವು ನಾಲ್ಕು ದಿನಗಳ ಹೂಡಿಕೆ ಉತ್ಸವಕ್ಕೆ ಮುನ್ನುಡಿ ಬರೆಯಲಿದೆ ಎಂದರು.
ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ ಒದಗಿಸಲಿದೆ. ವಿವಿಧ ಕ್ಷೇತ್ರಗಳ ದಿಗ್ಗಜರು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ರೂಪಿಸಲು ತಮ್ಮ ಒಳನೋಟಗಳನ್ನು ನೀಡಲಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.