ಬಡವರ ಮಕ್ಕಳ ಶಿಕ್ಷಣಕ್ಕಿಂತ ಓಲೈಕೆ ರಾಜಕಾರಣವೇ ಮುಖ್ಯವೇ?: ಸರಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಆರ್.ಅಶೋಕ್
ಬೆಂಗಳೂರು: ‘342 ಕೋಟಿ ರೂ.ಅನುದಾನ ನೀಡಲು ಯೋಗ್ಯತೆ ಇಲ್ಲದೆ ಬಿಜೆಪಿ ಸರಕಾರ 9 ಜಿಲ್ಲೆಗಳಲ್ಲಿ ಆರಂಭಿಸಿದ್ದ ವಿಶ್ವ ವಿದ್ಯಾನಿಲಯಗಳನ್ನ ಮುಚ್ಚುತ್ತೇವೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಸರಕಾರ, ಮುಸ್ಲಿಮರ ಶಿಕ್ಷಣಕ್ಕೆ 1,200 ಕೋಟಿ ರೂ.ವಿನಿಯೋಗಿಸಲು ಹೊರಟಿದೆ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ರವಿವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ತಮ್ಮ ಸರಕಾರದ ಬಳಿ 9 ವಿವಿಗಳನ್ನು ಉಳಿಸಿಕೊಳ್ಳಲು 342 ಕೋಟಿ ರೂ.ಹಣ ಇಲ್ಲ. ಆದರೆ ಮುಸ್ಲಿಮರ ಶಿಕ್ಷಣಕ್ಕೆ ಕೊಡಲು 1,200 ಕೋಟಿ ರೂ.ಇದೆ, ಅಲ್ಲವೇ? ಮುಸ್ಲಿಮ್ ಮಕ್ಕಳ ಶಿಕ್ಷಣಕ್ಕೆ ಅನುದಾನ ಕೊಡಿ, ಬೇಡ ಅನ್ನುವುದಿಲ್ಲ. ಆದರೆ ಬಡವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಪಯೋಗವಾಗುವ ವಿವಿಗಳನ್ನು ಯಾಕೆ ಮುಚ್ಚುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.
ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ 342 ಕೋಟಿ ರೂ.ಖರ್ಚು ಮಾಡಲೂ ಸಾಧ್ಯವಾಗದಷ್ಟು ಪಾಪರ್ ಆಗಿದೆಯಾ ನಿಮ್ಮ ಕಾಂಗ್ರೆಸ್ ಸರಕಾರ? ಬಡವರ ಮಕ್ಕಳ ಶಿಕ್ಷಣಕ್ಕಿಂತ ಓಲೈಕೆ ರಾಜಕಾರಣವೇ ಹೆಚ್ಚಾಗಿರುವ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು’ ಎಂದು ಆರ್.ಅಶೋಕ್ ಇದೇ ವೇಳೆ ವಾಗ್ದಾಳಿ ನಡೆಸಿದ್ದಾರೆ.