ವರ್ಷದೊಳಗೆ ಅನುಭವ ಮಂಟಪ ಪೂರ್ಣ: ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು : ವಿಶ್ವಗುರು ಬಸವಣ್ಣರ ಕರ್ಮಭೂಮಿ ಬೀದರ್‌ನ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ, ಉದ್ಘಾಟನೆ ಮಾಡಲಾಗುವುದು ಎಂದು ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ಮಂಗಳವಾರ ನಗರದ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಗುರು ಸಿದ್ದರಾಮೇಶ್ವರರ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ‘ನೊಳಂಬ ಸ್ಮರಣ ಸಂಚಿಕೆ’ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿವೆ. 12ನೆ ಶತಮಾನದಲ್ಲಿ ಶರಣರು ಸರ್ವರಿಗೂ ಸಮಾನತೆ ಕೊಡುವ ನಿಟ್ಟಿನಲ್ಲಿ ಮಾಡಿದ ಕ್ರಾಂತಿಯೇ ‘ಕಲ್ಯಾಣ ಕ್ರಾಂತಿ’ ಅದು ಬಸವಣ್ಣರ ಕ್ರಾಂತಿ ಎಂದು ಹೇಳಿದರು.
ಬಸವ ಕಲ್ಯಾಣದ ಅನುಭವ ಮಂಟಪ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ವಿಶ್ವಕ್ಕೆ ನೀಡಿದ ಕೀರ್ತಿಗೆ ಪಾತ್ರವಾಗಿದೆ. ಶರಣರೆಲ್ಲರೂ ಸ್ವಾತಂತ್ರ್ಯ, ಸಮಾನತೆ, ಕಾಯಕ, ಸಹೋದರತ್ವ, ಭ್ರಾತೃತ್ವ, ದಾಸೋಹ, ಸಹಬಾಳ್ವೆಯ ಸುಂದರ ಸಮಾಜ ನಿರ್ಮಾಣ ಮಾಡಬೇಕೆನ್ನುವ ಕನಸನ್ನು ಕಂಡಿದ್ದರು. ಅವರೆಲ್ಲರೂ ವರ್ಗ, ವರ್ಣ ರಹಿತ ಸಮಾಜಕ್ಕಾಗಿ ಮತ್ತು ಅಸ್ಪೃಶ್ಯತೆ, ಕಂದಾಚಾರದ ವಿರುದ್ಧ ಹೋರಾಟ ಮಾಡಿದ್ದರು ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.
ಈಗಿರುವ ಅನುಭವ ಮಂಟಪ ನಿರ್ಮಾಣಕ್ಕೆ ಲಿಂಗೈಕ್ಯ ಚನ್ನಬಸವ ಪಟ್ಟದೇವರು ಮತ್ತು ಶತಾಯುಷಿ ಲೋಕನಾಯಕ ಭೀಮಣ್ಣ ಖಂಡ್ರೆ ಅವರ ಪಾತ್ರ ಅಪಾರವಾಗಿದೆ. ಆಧುನಿಕ ಅನುಭವ ಮಂಟಪದ 770 ಕಂಬಗಳಲ್ಲಿ ಬಸವಾದಿ ಶರಣರೆಲ್ಲರ ವಚನಗಳನ್ನು ಕೆತ್ತಿಸಲಾಗುವುದು. ಈ ಮೂಲಕ ಶರಣ ಸಾಹಿತ್ಯ, ವಚನ ಸಾಹಿತ್ಯ ಚಿರಸ್ಥಾಯಿಯಾಗಿ ಉಳಿಯುಂತೆ ಮಾಡಲಾಗುವುದು ಎಂದರು.
ಸಿದ್ಧರಾಮೇಶ್ವರರು ವಚನಕಾರರಷ್ಟೇ ಅಲ್ಲ, ಸಮಾಜ ಸೇವಕರೂ ಆಗಿದ್ದರು. ದೇವಾಲಯಗಳು, ಕೆರೆಗಳನ್ನು ಕಟ್ಟಿಸಿದ್ದರು, ನಂಬಿ ಬಂದವರ ಕಣ್ಣೀರನ್ನು ಒರೆಸಿದವರು. ಅವರ ಬದುಕು ಎಲ್ಲರಿಗೂ ಪ್ರೇರಣೆಯಾಗಬೇಕು. ಸಾವಿರಾರು ವಚನಗಳನ್ನು ರಚಿಸಿದ್ದು, ಅವುಗಳ ಪೈಕಿ ಕೆಲವು ಮಾತ್ರವೇ ಲಭ್ಯವಾಗಿವೆ. ಅವರ ಸಮಗ್ರ ಜೀವನ ಚರಿತ್ರೆಯು ಜಗತ್ತಿಗೆ ತಿಳಿಯಬೇಕು. ನವಭಾರತ ನಿರ್ಮಾಣದಲ್ಲಿ ಆರೋಗ್ಯ, ಶೈಕ್ಷಣಿಕ ಕ್ಷೇತ್ರ ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂದರೆ ಲಿಂಗಾಯುತ ವೀರಶೈವ ಸಮುದಾಯದ ಒಳಪಂಗಡಗಳ ಸೇವೆ ಅಪಾರವಾಗಿದೆ ಎಂದು ಅವರು ಸ್ಮರಿಸಿದರು.
ಎಲ್ಲ ಜಾತಿ, ಧರ್ಮದ ಜನರಿಗೆ ಆಶ್ರಯ ನೀಡಿ, ಶಿಕ್ಷಣ ಕೊಟ್ಟು, ಉಚಿತವಾದ ದಾಸೋಹ ನೀಡಿರುವುದಕ್ಕಾಗಿಯೇ ರಾಜ್ಯ ಮತ್ತು ರಾಷ್ಟ್ರ ಇಷ್ಟೊಂದು ಅಭಿವೃದ್ಧಿಯಾಗಲು ಕಾರಣ. ಸಮಾಜದಲ್ಲಿರುವ ಎಲ್ಲ ಅನಿಷ್ಠಗಳನ್ನು ಅಂತ್ಯಹಾಡಿ, ಪ್ರೀತಿ, ವಿಶ್ವಾಸ, ನಂಬಿಕೆ ಬರಬೇಕೆಂದರೆ ಪ್ರತಿಯೊಬ್ಬರೂ ಬಸವಾದಿ ಶರಣರ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಈಶ್ವರ್ ಖಂಡ್ರೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ವಿಜಯೇಂದ್ರ, ಎಸ್.ಆರ್.ವಿಶ್ವನಾಥ್, ಜ್ಯೋತಿ ಗಣೇಶ್, ಸಂಘದ ಅಧ್ಯಕ್ಷ ಸಿದ್ದರಾಮಪ್ಪ, ಬೆಳ್ಳಿ ಪ್ರಕಾಶ್, ಕೆ.ಬಿ.ಶಶಿಧರ್, ಪರಮಶಿವಯ್ಯ, ಲೋಕೇಶ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.