ಚಿಂಕಾರ ವನ್ಯಜೀವಿ ಧಾಮದಲ್ಲಿ ಹುಲ್ಲು ಬೆಳೆಸಲು ಕ್ರಮ: ಈಶ್ವರ್ ಖಂಡ್ರೆ

ಬೆಂಗಳೂರು : ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣದಲ್ಲಿ ಚಿಂಕಾರ ವನ್ಯಜೀವಿ ಧಾಮದಲ್ಲಿ ಪ್ರಾಣಿಗಳಿಗೆ ಆಹಾರ ಒದಗಿಸಲು ಹುಲ್ಲು ಬೀಜ ಬಿತ್ತನೆ, ನಾಟಿ ಮಾಡಲಾಗುತ್ತಿದ್ದು, ಹುಲ್ಲು ಗಾವಲಿನಲ್ಲಿ ಬೆಳೆದಿರುವ ಲಾಂಟನಾ ತೆರವಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸೋಮವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಚಿದಾನಂದ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಅರಣ್ಯದಲ್ಲಿ ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗದಂತೆ ಹಾಲಿ ಇರುವ ಕಟ್ಟೆಗಳಲ್ಲಿ ಹೂಳು ತೆಗೆಯುವುದು, ನಾಲಾ ಬದು, ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ನೀರು ಸಂಗ್ರಹ ಹೆಚ್ಚಿಸಲಾಗುತ್ತಿದೆ ಎಂದರು.
ಚಿಂಕಾರಾ ವನ್ಯಜೀವಿಧಾಮದಲ್ಲಿ ವನ್ಯಜೀವಿ ಕಳ್ಳಬೇಟೆ ತಡೆಗೆ ಶಿಬಿರ ಸ್ಥಾಪಿಸಲಾಗಿದ್ದು, ಸಿಬ್ಬಂದಿ ರಾತ್ರಿ ಹಗಲು ಗಸ್ತು ತಿರುಗುತ್ತಿದ್ದಾರೆ. ಕಳ್ಳ ಬೇಟೆಯ ಮೇಲೆ ನಿರಂತರ ನಿಗಾ ಇಡಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಕಾಡ್ಗಿಚ್ಚು ನಿಯಂತ್ರಿಸಲು ಹೊಸ ಬೆಂಕಿ ರೇಖೆ ನಿರ್ಮಾಣ, ಹಳೆಯ ಬೆಂಕಿ ರೇಖೆ ನಿರ್ವಹಣೆ, ಕಾವಲುಗಾರರ ನೇಮಕ, ಗಸ್ತು ನಿಯೋಜನೆ, ದಿನದ 24 ಗಂಟೆಯೂ ಮುನ್ನೆಚ್ಚರಿಕೆ ವ್ಯವಸ್ಥೆ ಸೇರಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.