ಸೋಲಿನ ಭೀತಿಯಲ್ಲಿ ಬಿಜೆಪಿಯಿಂದ ಐಟಿ, ಈಡಿ ಅಸ್ತ್ರ ಪ್ರಯೋಗ : ಸಂಸದ ಡಿ.ಕೆ.ಸುರೇಶ್
ರಾಮನಗರ : ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿಯು ಐಟಿ, ಈಡಿ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಪ್ರಯೋಗಿಸುತ್ತಿದೆ. ಈ ಪ್ರಯೋಗಗಳು ಪ್ರತಿ ಚುನಾವಣೆಯಲ್ಲೂ ನಡೆಯುತ್ತಿದ್ದು, ನಮಗೆ ಇದು ಹೊಸತಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಿಳಿಸಿದರು.
ಬುಧವಾರ ರಾಮನಗರದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೈರೇಗೌಡ, ಜೆಡಿಎಸ್ ಮುಖಂಡರಾದ ರಾಜಶೇಖರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಲು ಹೇಳಿ. 10 ವರ್ಷಗಳ ಹಿಂದೆ ಮೋದಿ ನೀಡಿರುವ ಹೇಳಿಕೆ, ಕೊಟ್ಟಿರುವ ವಚನಗಳ ಬಗ್ಗೆ ಇಂದು ಏನು ಹೇಳುತ್ತಾರೆ ಕೇಳಿ. ಅವರಿಂದ ಶ್ರೀರಾಮನವಮಿ ದಿನ ಈ ವಿಚಾರವಾಗಿ ಸತ್ಯ ಹೇಳಿಸಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸುರೇಶ್ ಕರೆ ನೀಡಿದರು.
ಬಿಜೆಪಿಯವರು ಏನಾದರೂ ಮಾಡಿ ನಮ್ಮ ನಾಯಕರನ್ನು ಕುಗ್ಗಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳು ಯಾವುದೂ ಯಶಸ್ಸಾಗುವುದಿಲ್ಲ. ಐಟಿ, ಈಡಿ, ಸಿಬಿಐ ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷ ಕಟ್ಟಿಹಾಕಿ ಸೋಲಿಸಲು ಬಂದಿದ್ದಾರೆ ಎಂದು ಅವರು ಟೀಕಿಸಿದರು.
ರಾಮದೇವರ ಬೆಟ್ಟವನ್ನು ನಾವೇ ಅಭಿವೃದ್ಧಿ ಮಾಡುತ್ತೇವೆ ಎಂದು ಬಿಜೆಪಿ ನಾಯಕ ಸಿ.ಎನ್.ಅಶ್ವತ್ಥ ನಾರಾಯಣ ನೀಡಿರುವ ಹೇಳೀಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್, ಅವರು ಯಾವಾಗ ಅಭಿವೃದ್ಧಿ ಮಾಡುತ್ತಾರೆ? ಅವರು ನಾಲ್ಕು ವರ್ಷಗಳ ಕಾಲ ಇದೇ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದರಲ್ಲವೇ? ಜಿಲ್ಲೆಯಲ್ಲಿ ಕಸ ಗುಡಿಸಿ ಕ್ಲೀನ್ ಮಾಡುತ್ತೇನೆ ಎಂದಿದ್ದರು. ಅವರು ಕ್ಲೀನ್ ಮಾಡಿದ್ರಾ? ಎಂದರು.
ರಾಮ ದೇವರ ಬೆಟ್ಟ ಅಭಿವೃದ್ಧಿಗೆ ಬಜೆಟ್ ನಲ್ಲಿ ಎಷ್ಟು ಅನುದಾನ ಇಟ್ಟಿದ್ದಾರೆ? ಎಷ್ಟು ಬಿಡುಗಡೆ ಮಾಡಿದ್ದಾರೆ? ರಣಹದ್ದು ಸಂರಕ್ಷಣಾ ಇಲಾಖೆ ಅನುಮತಿ ಪಡೆದಿದ್ದಾರಾ? ಚುನಾವಣೆಗಾಗಿ ಇಂದು ಬೆಟ್ಟ ಹತ್ತಿದ್ದಾರೆ. ಇದು ಚುನಾವಣಾ ತಂತ್ರ. ರಾಮ ನಮ್ಮ ಊರಿನಲ್ಲೂ ಇದ್ದಾನೆ. ನಾವು ದೇವಾಲಯ ಕಟ್ಟಿದ್ದೇವೆ, ಪೂಜೆ ಮಾಡುತ್ತಿದ್ದೇವೆ. ನಮ್ಮವರೂ ರಸ್ತೆಯಲ್ಲಿ ಪಾನಕ, ಮಜ್ಜಿಗೆ ಹಂಚುತ್ತಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಬಾವುಟ, ಕೇಸರಿ ಶಾಲು ಹಾಕಿಕೊಂಡು ರಾಮನ ಬೆಟ್ಟಕ್ಕೆ ಹತ್ತಿದರೆ ರಾಮನ ಭಕ್ತರಾಗುವುದಿಲ್ಲ. ಅವರು ಚುನಾವಣೆಗೆ ಮಾತ್ರ ರಾಮನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಜಾಗ ಅಭಿವೃದ್ಧಿಗೆ ರಣಹದ್ದು ಸಂರಕ್ಷಣಾ ಇಲಾಖೆಯ ಅನುಮತಿ ಪಡೆಯಲು ಅರ್ಜಿ ಹಾಕಿದ್ದಾರಾ? ಹಾಕಿದ್ದರೆ ಆ ಅರ್ಜಿಯನ್ನು ತೋರಿಸಲಿ ಸಾಕು ಎಂದು ಸುರೇಶ್ ಪ್ರಶ್ನಿಸಿದರು.
ನಾವು ರಾಮನನ್ನು ನಮ್ಮ ಊರಿನಲ್ಲೆ ನೋಡುತ್ತಿದ್ದೇವೆ. ಅಯೋಧ್ಯೇಗೆ ಯಾಕೆ ಹೋಗಬೇಕು? ನಮ್ಮ ಊರು, ತಾಲೂಕಿನಲ್ಲಿ ದೇವಾಲಯ ಕಟ್ಟಿ ಅಲ್ಲೇ ಪೂಜೆ ಮಾಡುತ್ತೇವೆ. ನೀವು ರಾಜಕೀಯಕ್ಕೋಸ್ಕರ ರಾಮನ ಹೆಸರು ಹೇಳುತ್ತಿದ್ದೀರಿ. ನಿಮ್ಮ ಉದ್ದೇಶ ರಾಜಕೀಯವೇ ಹೊರತು, ಆತನ ಕೃಪೆಗಾಗಿ ಅಲ್ಲ ಎಂದು ಅವರು ತಿರುಗೇಟು ನೀಡಿದರು.
ಅಂಬೇಡ್ಕರ್ ಕೊಟ್ಟ ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಕೇಜ್ರಿವಾಲ್ ಪ್ರತಿ ಹಂತದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಾ ದಿಲ್ಲಿ ಹಾಗೂ ಪಂಜಾಬ್ ನಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿ ಉತ್ತಮ ಸರಕಾರ ನಡೆಸುತ್ತಿದ್ದಾರೆ. ಅವರು ಎಲ್ಲಿ ತಮ್ಮ ಪ್ರಾಬಲ್ಯ ವಿಸ್ತರಿಸುತ್ತಾರೋ ಎಂಬ ಕಾರಣಕ್ಕೆ ಅವರ ವಿರುದ್ಧ ಈಡಿ, ಸಿಬಿಐ ತನಿಖಾ ಸಂಸ್ಥೆಗಳ ಮೂಲಕ ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ ಎಂದು ಸುರೇಶ್ ದೂರಿದರು.