ಮೋದಿಯನ್ನು ಪ್ರಶ್ನಿಸಲಾಗದ ಪುಕ್ಕಲು ಬಿಜೆಪಿ ನಾಯಕರು ನಮ್ಮ ವಿರುದ್ಧ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ: ಸಿದ್ದರಾಮಯ್ಯ
ಸರಕಾರದ ವಿರುದ್ಧ ‘ಪರಿಹಾರ ಕೊಡಿ ಕುರ್ಚಿ ಬಿಡಿ’ ಘೋಷವಾಕ್ಯದಡಿ ಪ್ರತಿಭಟನೆಗೆ ಕೆರೆ ನೀಡಿದ್ದ ಬಿಜೆಪಿ
ಬೆಂಗಳೂರು: ಬರಪೀಡಿತ ಪ್ರದೇಶದ ರೈತರಿಗೆ ನೀಡಬೇಕಾಗಿರುವ ಪರಿಹಾರದ ಹಣ ನೀಡದೆ ಐದು ತಿಂಗಳಿನಿಂದ ಗೋಳಾಡಿಸುತ್ತಿರುವ ಪ್ರಧಾನಿ ಮೋದಿಯನ್ನು ಪ್ರಶ್ನಿಸಲಾಗದ ಪುಕ್ಕಲು ಬಿಜೆಪಿ ನಾಯಕರು ನಮ್ಮ ವಿರುದ್ಧ ‘ಪರಿಹಾರ ಕೊಡಿ ಕುರ್ಚಿ ಬಿಡಿ’ ಎಂಬ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ, ನಾಡಿನ ರೈತರಿಗೆ ಬಗೆಯುತ್ತಿರುವ ದ್ರೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಈ ಸಂಬಂಧ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಅವರು, ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಬಿಜೆಪಿಯವರು ಬೀಜ-ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿದರು. ಪರಿಹಾರ ಕೊಡಿ ಎಂದು ಕೇಳಿದಾಗೆಲ್ಲ ನಾವೇನು ನೋಟ್ ಪ್ರಿಂಟಿಂಗ್ ಮೆಷಿನ್ ಇಟ್ಟು ಕೊಂಡಿದ್ದೆವೆಯೇ ಎಂದಿದ್ದರು ಎಂದು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಇದೇ ಬಿಜೆಪಿ. ಇಂತಹ ಹುಟ್ಟು ರೈತ ವಿರೋಧಿ ಬಿಜೆಪಿ ನಾಯಕರು ಈಗ ವೇಷ ಬದಲಿಸಿ ಸುರಿಸುವ ಕಣ್ಣೀರು ಮೊಸಳೆಯದ್ದು ಎಂದು ಅರ್ಥಮಾಡಿಕೊಳ್ಳದಷ್ಟು ರೈತರು ದಡ್ಡರಲ್ಲ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.
ಬರಗಾಲದ ಸೂಚನೆ ಸಿಗುತ್ತಿದ್ದಂತೆಯೆ ನಮ್ಮ ಸರಕಾರ ಯುದ್ಧೋಪಾದಿಯಲ್ಲಿ ಸಮೀಕ್ಷೆ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಸಮೀಕ್ಷೆಯ ನಂತರ ಕಳೆದ ವರ್ಷದ ಸೆ. 13ರಂದು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಬರಗಾಲದಿಂದಾಗಿ 37ಸಾವಿರ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಇದರಲ್ಲಿ 18,177ಕೋಟಿ ರೂ. ಪರಿಹಾರವನ್ನು ನೀಡುವಂತೆ ಸೆ.23ಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆವು ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ ನಲ್ಲಿ ಬರ ಅಧ್ಯಯನಕ್ಕಾಗಿ ಕೇಂದ್ರದಿಂದ ತಜ್ಞರ ತಂಡ ಆಗಮಿಸಿತ್ತು. ಇಲ್ಲಿಯವರೆಗೆ ಅದು ನೀಡಿರುವ ವರದಿಯ ಗತಿ ಏನಾಗಿದೆಯೋ ಗೊತ್ತಿಲ್ಲ. ಕಂದಾಯ ಸಚಿವ ಕೃಷ್ಣಬೈರೇಗೌಡ ಜೊತೆ ನಾನು ಪ್ರಧಾನಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಕೃಷಿ ಸಚಿವರು, ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇಲ್ಲಿಯವರೆಗೆ ಬರ ಪರಿಹಾರ ಕೋರಿ 17 ಪತ್ರಗಳನ್ನು ಬರೆದಿದ್ದೇವೆ. ಯಾವುದಕ್ಕೂ ಉತ್ತರವೂ ಇಲ್ಲ, ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಬಿಜೆಪಿ ನಾಯಕರು ಯಾವ ಮುಖ ಹೊತ್ತು ಬರಪೀಡಿತ ರೈತರ ಬಳಿ ನಮ್ಮ ವಿರುದ್ಧ ದೂರು ತೆಗೆದುಕೊಂಡು ಹೋಗುತ್ತಾರೆ. ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯದಿಂದ ಈಗಾಗಲೇ ರಾಜ್ಯದ ರೈತರು ರೊಚ್ಚಿಗೆದ್ದಿದ್ದಾರೆ. ಆದುದರಿಂದ, ಅವರ ಬಳಿ ಹೋಗುವಾಗ ಜಾಗ್ರತೆಯಿಂದ ಇರಿ ಎಂದಷ್ಟೇ ಹೇಳಬಯಸುತ್ತೇನೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಕೇಂದ್ರ ಸರಕಾರ ಪರಿಹಾರ ನೀಡದೆ ಇದ್ದರೂ ರಾಜ್ಯ ಸರಕಾರ ಕೈಕಟ್ಟಿ ಕೂತಿಲ್ಲ. ಬರಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 870 ಕೋಟಿ ರೂ.ಗಳಿದೆ. ಬರಪೀಡಿತ 36 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದೇವೆ. 21 ಜಿಲ್ಲೆಗಳಲ್ಲಿ ಟ್ಯಾಂಕರ್ ನಲ್ಲಿ ನೀರು ಪೂರೈಸಲು ಟೆಂಡರ್ ಕರೆದಿದ್ದೇವೆ. 158 ಕಡೆಗಳಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ತೋಡಲಾಗಿದೆ ಎಂದು ಅವರು ಹೇಳಿದ್ದಾರೆ.
ಖಾಸಗಿ ಜಮೀನು ಇರುವ 3 ಸಾವಿರ ಕಡೆಗಳಲ್ಲಿ ಕೊಳವೆ ಬಾವಿಗಳನ್ನು ತೋಡಲು ಸ್ಥಳಗಳನ್ನು ಗುರುತಿಸಲಾಗಿದೆ. ಬಿತ್ತನೆ ಬೀಜದ 6.50 ಲಕ್ಷ ಕಿಟ್ ಗಳನ್ನು ವಿತರಿಸಿದ್ದೇವೆ. 16 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ಕರೆದಿದ್ದೇವೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ತಾಲೂಕು ಮಟ್ಟದ ಕಾರ್ಯಾಚರಣೆ ಪಡೆಯನ್ನು ರಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಪಡೆಗಳು ಇಲ್ಲಿಯವರೆಗೆ 350ಕ್ಕೂ ಹೆಚ್ಚು ಸಭೆಗಳನ್ನು ನಡೆಸಿವೆ. ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 210 ಸಭೆಗಳನ್ನು ನಡೆಸಿದೆ. ಜ.25ರ ವರೆಗೆ 29 ಲಕ್ಷ ರೈತರಿಗೆ 545 ಕೋಟಿ ರೂ.ಪರಿಹಾರ ನೀಡಲಾಗಿದೆ. ಬೆಳೆ ಹಾನಿ ಸಮೀಕ್ಷೆಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ದಾಖಲೀಕರಣದಲ್ಲಿ ಎದುರಾಗಿರುವ ತೊಡಕುಗಳನ್ನು ಸರಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಬಿಜೆಪಿ ನಾಯಕರಿಗೆ ಕರ್ನಾಟಕದ ನೆಲದ ಮಣ್ಣು ಮತ್ತು ನೀರಿನ ಋಣ ಇದ್ದರೆ ದಿಲ್ಲಿಗೆ ಹೋಗಿ ಕನ್ನಡಿಗರ ಬಗ್ಗೆ ಯಾಕಿಷ್ಟು ನಿಮಗೆ ದ್ವೇಷ? ಎಂದು ಪ್ರಧಾನಿಯನ್ನು ಕೇಳಬೇಕು. ಪರಿಹಾರಕ್ಕಾಗಿ ಒತ್ತಾಯಿಸಿ ಪ್ರಧಾನಿ ಕಾರ್ಯಾಲಯದ ಮುಂದೆ ಧರಣಿ ಕೂರಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇವರ ಆಟಾಟೋಪಗಳೇನಿದ್ದರೂ ರಾಜ್ಯದಲ್ಲಿ ಮಾತ್ರ, ಇಲ್ಲಿ ಎಲ್ಲರು ಹುಲಿ-ಸಿಂಹಗಳೇ, ಪ್ರಧಾನಮಂತ್ರಿ, ಗೃಹಸಚಿವರನ್ನು ಕಂಡಕೂಡಲೇ ಬಾಲ ಮುದುರಿದ ಇಲಿಗಳಾಗುತ್ತಾರೆ. ಬರಪರಿಹಾರದಲ್ಲಿ ಅನ್ಯಾಯ, ತೆರಿಗೆ ಪಾಲಿನಲ್ಲಿ ವಂಚನೆ, ಹಣಕಾಸು ಆಯೋಗದ ಅನುದಾನದಲ್ಲಿ ಮೋಸ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ ನೀಡದೆ ಅನ್ಯಾಯ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಒಂದೇ ಎರಡೇ? ಹೀಗಿದ್ದರೂ ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವರೆಲ್ಲ ಯಾವ ಮುಖ ಹೊತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಕೇಳಲು ಜನರ ಬಳಿ ಹೋಗುತ್ತಾರೆ? ಇಂತಹವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ. ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ತಿಳಿದಿರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.