ರಾಜ್ಯಪಾಲರಿಗೆ ಅವಮಾನ ಆರೋಪ : ದಿನೇಶ್ ಗುಂಡೂರಾವ್, ಐವನ್ ಡಿಸೋಜಾ ಸೇರಿ ಹಲವರ ವಿರುದ್ಧ ಬಿಜೆಪಿ ದೂರು
ಬೆಂಗಳೂರು : ರಾಜ್ಯಪಾಲರಿಗೆ ಅವಮಾನ ಮಾಡಿದ ಆರೋಪದಡಿ ದಿನೇಶ್ ಗುಂಡೂರಾವ್, ಐವನ್ ಡಿಸೋಜಾ ಸೇರಿ ಹಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿಯು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮಂಗಳವಾರ ದೂರು ಸಲ್ಲಿಸಿದೆ.
ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ‘ಕಾಂಗ್ರೆಸ್ಸಿನದು ಸರಕಾರಿ ಪ್ರೇರೇಪಿತ ಪ್ರತಿಭಟನೆ. ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯಪಾಲರಿಗೆ ಅವಮಾನ ಮಾಡುವಂತೆ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಪ್ರತಿಭಟನೆ ನಡೆಸುವ ವೇಳೆ ರಾಜ್ಯಪಾಲರ ಫೋಟೊಗೆ ಚಪ್ಪಲಿಯಿಂದ ಹೊಡೆದುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪರಿಷತ್ ಸದಸ್ಯ ಐವಾನ್ ಡಿಸೋಜ ಅವರು ರಾಜ್ಯಪಾಲರಿಗೆ ಧಮ್ಕಿ ಹಾಕುವ ರೀತಿ ಮಾತನಾಡಿದ್ದಾರೆ ಎಂದು ಕಾರಜೋಳ ದೂರಿದರು.
ಬಾಂಗ್ಲಾದ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ ಎಂಬುದಾಗಿ ಹೇಳಿಕೆ ನೀಡಿರುವ ಐವಾನ್ ಡಿಸೋಜ ಅವರು ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಓಡಿಸುವುದಾಗಿ ತಿಳಿಸಿದ್ದು, ಅವರಿಗೆ ಪಾಕ್ ಉಗ್ರರ ನಂಟಿದೆಯೇ ಎಂಬ ಸಂಶಯ ಬರುತ್ತಿದೆ. ಅವರ ಹೇಳಿಕೆ ಖಂಡನೀಯ ಎಂದು ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಐವನ್ ಡಿಸೋಜಾ ಅವರ ಹೇಳಿಕೆ ಬಗ್ಗೆ ಗಮನ ಸೆಳೆದಿದ್ದೇವೆ. ಝಮೀರ್ ಅಹ್ಮದ್ ಹೇಳಿಕೆಯನ್ನೂ ಪ್ರಸ್ತಾಪಿಸಿದ್ದೇವೆ. ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಸೇರಿ ಕಾಂಗ್ರೆಸ್ಸಿನ ಅನೇಕರ ನಿಂದನಾ ಟೀಕೆಗಳ ಕುರಿತು ರಾಜ್ಯಪಾಲರಿಗೆ ವಿವರಿಸಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜುನಾಥ್, ಶಾಸಕ ಡಾ.ಅವಿನಾಶ್ ಜಾಧವ್, ಎಸ್‍ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಂಸದ ಮುನಿಸ್ವಾಮಿ ಇದ್ದರು.