ಕೋರ್ಟ್‍ನಲ್ಲಿ ವಾದ ಮಂಡನೆ, ತೀರ್ಪು ಕನ್ನಡದಲ್ಲಿ ಆಗಲಿ: ನ್ಯಾ.ಕೃಷ್ಣ ಎಸ್.ದೀಕ್ಷಿತ್

ಬೆಂಗಳೂರು : ನ್ಯಾಯಾಲಯದ ತೀರ್ಪು ಮತ್ತು ವಾದಗಳು ಇಂಗ್ಲಿಷ್ ನಲ್ಲಿಯೇ ಆಗುತ್ತವೆ. ಅದರಿಂದ ರೈತರು, ಕಾರ್ಮಿಕರು ಸೇರಿದಂತೆ ಸಾಮಾನ್ಯರಿಗೆ ತಿಳಿಯುವುದೇ ಇಲ್ಲ. ಅದಕ್ಕಾಗಿ ಎಲ್ಲ ನ್ಯಾಯಾಲಯಗಳಲ್ಲಿ ಕನಿಷ್ಠ ಪಕ್ಷ ವಾದ ಮಂಡನೆ ಕನ್ನಡದಲ್ಲಿ ಆಗಲಿ ಎಂದು ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ತಿಳಿಸಿದ್ದಾರೆ.
ಸೋಮವಾರ ನಗರದ ಎನ್‍ಜಿಒ ಸಭಾಂಗಣದಲ್ಲಿ ಭಾರತೀಯ ಭಾಷಾ ಅಭಿಯಾನ- ಕರ್ನಾಟಕದ ವತಿಯಿಂದ ‘ನ್ಯಾಯಾಂಗದಲ್ಲಿ ಕನ್ನಡ ಅನುಷ್ಠಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತ, ಕಾರ್ಮಿಕರು ಮಳೆ, ಚಳಿಯಲ್ಲಿ ಕೆಲಸ ಮಾಡಿ ಭತ್ತ, ಗೋದಿ, ರಾಗಿ ಕೊಟ್ಟು ನಮ್ಮನ್ನು ಜೀವಂತ ಇಟ್ಟಿದ್ದಾರೆ. ಅವರಿಗೆ ನಾವು ಮಾಡಿದ ವಾದ, ನೀಡಿದ ತೀರ್ಪು ತಿಳಿಯುವುದು ಬೇಡವಾ? ಎಂದು ಪ್ರಶ್ನಿಸಿದರು.
ನಾನು ಸಂಸ್ಕೃತದಲ್ಲಿ ತೀರ್ಪು ಬರೆದರೆ ನೀವು ಏನು ಮಾಡುತ್ತೀರಿ? ಅದನ್ನು ಹೋಗಿ ಕಸದ ಬುಟ್ಟಿಗೆ ಹಾಕುತ್ತೀರಿ ಯಾಕೆಂದರೆ ಸಂಸ್ಕೃತ ನಿಮಗೆ ಗೊತ್ತಿಲ್ಲ. ಇದೇ ಸಮಸ್ಯೆ ಕಕ್ಷಿದಾರರಿಗೂ ಆಗುತ್ತದೆ ಎಂದು ಹೇಳಿದರು.
ಕಕ್ಷಿದಾರರಿಗೆ ಏನು ಅನ್ಯಾಯವಾಗಿದೆ. ಏನು ಸಮಸ್ಯೆಯಾಗಿದೆ ಎನ್ನುವುದನ್ನು ಕನ್ನಡದಲ್ಲಿ ಹೇಳುವುದು ಸುಲಭ ಅದು ಕಷ್ಟ ಅಲ್ಲ. ರನ್ನ, ಜನ್ನ, ಪೊನ್ನರ ಉತ್ಕೃಷ್ಟ ಪದಗಳನ್ನು ಉಪಯೋಗಿಸ ಬೇಕಿಲ್ಲ. ಸಾಧಾರಣ ಕನ್ನಡದಲ್ಲಿ ಮಾತನಾಡಿದರೂ ಅರ್ಥವಾಗುತ್ತದೆ. ನ್ಯಾಯಾಧೀಶರು ಬೌದ್ಧಿಕ ವಿಷಯವನ್ನು ನೋಡಿ ತೀರ್ಪು ಕೊಡುವುದಿಲ್ಲ. ವಕೀಲರು ಮಾಡುವ ವಾದ ಹೃದಯಕ್ಕೆ ಹೋಗಬೇಕು ಎಂದರು.
ಯಾವುದೇ ಉತ್ಕೃಷ್ಟ ಸಂಸ್ಕೃತಿ ಆಯಾ ತಾಯಿ ಭಾಷೆಯಲ್ಲಿ ಇರುತ್ತದೆ. ಜನನಿಯ ಜೋಗುಳ ವೇದದ ಘೋಷ ಇದನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಬ್ರಿಟೀಷ್ ಭಾಷೆಇಂಗ್ಲಿಷ್ ಬಂದು ನಮ್ಮ ನೂರಾರು ಭಾಷೆಯನ್ನು ನುಂಗಿ ನೀರು ಕುಡಿದು ಬಿಟ್ಟಿದೆ. ಭಾರತದಲ್ಲಿ ಸಂಸ್ಕೃತದ ಸಾವು ಯಾಕಾಯಿತು. ಜನ ಸಾಮಾನ್ಯರ ನಾಲಿಗೆಯ ಮೇಲೆ ಯಾವ ಭಾಷೆ ಕುಣಿಯುವುದಿಲ್ಲವೋ ಆ ಭಾಷೆ ಅವಸಾನವಾಗುತ್ತದೆ ಎಂದರು.
ನ್ಯಾಯಾಲಯದಲ್ಲಿ ಪ್ರಾದೇಶಿಕ ಭಾಷೆ ಬಳಸಬೇಡಿ ಎಂದು ಸಂವಿಧಾನ ಎಲ್ಲಿಯೂ ಹೇಳಿಲ್ಲ. ಇಂಗ್ಲಿಷ್ ನಿಂದ ನಮ್ಮ ನೆಲದ ಜೊತೆಗಿನ ಸಂಬಂಧ ಕಳೆದುಕೊಂಡು ಬಿಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಆರ್.ದೇವದಾಸ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್.ಮಿಟ್ಟಲ ಕೋಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ ಬಿ.ಗೌಡ, ಅತುಲ ಕೊಠಾರಿ, ವಿನೋದ್.ಎ ಮತ್ತಿತರರು ಹಾಜರಿದ್ದರು.