ಕಲಬುರಗಿ | ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ
ಮರಲಿಂಗಪ್ಪ ತೆಳಗೇರಿ (67)
ಕಲಬುರಗಿ : ಎದೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮರಲಿಂಗಪ್ಪ ತೆಳಗೇರಿ (67) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ 7 ಗಂಟೆಗೆ ಪುತ್ರ ಮರೆಪ್ಪ ತೆಳಗೇರಿ (28) ಜೊತೆ ಮೃತ ಮರಲಿಂಗಪ್ಪ ವಾಡಿಯಿಂದ ಚಾಮನೂರು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಮರಲಿಂಗಪ್ಪ ಅವರ ಸೊಸೆಯ ಕುಟುಂಬದ ಸಂಬಂಧಿಕರು ಬೈಕಿಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಇದರಿಂದ ತಂದೆ-ಮಗ ಇಬ್ಬರೂ ಬೈಕ್ನಿಂದ ರಸ್ತೆ ಮೇಲೆ ಬೀಳುತ್ತಿದ್ದಂತೆ ಕಾರಿನಿಂದ ಇಳಿದ ಹಂತಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ವೇಳೆ ಪುತ್ರ ಮರೆಪ್ಪ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದು, ತಂದೆ ಮರಲಿಂಗಪ್ಪನ ಎದೆಯ ಮೇಲೆ ಕಲ್ಲು ಬಂಡೆ ಎತ್ತಿ ಹಾಕಿ ಹಂತಕರು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವು ತಿಂಗಳ ಹಿಂದೆ ಮರಲಿಂಗಪ್ಪನ ಸೊಸೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಮರಲಿಂಗಪ್ಪ ಕುಟುಂಬದ ಕಿರುಕುಳ ಕಾರಣ ಎಂದು ಶಂಕಿಸಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮರೆಪ್ಪ ಅವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಶಹಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಕೆ.ತಿರುಮಲೇಶ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.