ಇಮಾಮಸಾಬ ಎಂ.ವಲ್ಲೆಪನವರಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಇಮಾಮಸಾಬ ಎಂ.ವಲ್ಲೆಪನವರ
ಬೆಂಗಳೂರು : ಡೊಳ್ಳಿನ ಪದ ಹಾಡುವಲ್ಲಿ ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿರುವ ಇಮಾಮಸಾಬ ಎಂ.ವಲ್ಲೆಪನವರ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
58 ವರ್ಷದಿಂದ ಭಾವೈಕ್ಯತೆ ಸಾರುವ ಡೊಳ್ಳಿನ ಪದ ಹಾಡುತ್ತಾ, ಜಾನಪದ ಲೋಕದಲ್ಲಿ ಹೆಸರು ಮಾಡಿದ ಇಮಾಮಸಾಬ ಅವರು, 1998 ರಿಂದ 2001ರವರೆಗೆ ಜಾನಪದ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಜಾನಪದ ವಿವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ, ಇಮಾಮಸಾಬರನ್ನು ಇವತ್ತಿಗೂ ಜನ ʼಐಎಂ ಟೇಲರ್ʼ ಎಂದೇ ಕರೆಯುತ್ತಾರೆ. ಇಮಾಮಸಾಬ ಜಾನಪದ ಕ್ಷೇತ್ರದಲ್ಲಿನ ಸಾಧನೆಗೆ ʼರಾಣಿ ಚೆನ್ನಮ್ಮ ಪ್ರಶಸ್ತಿʼ, ʼಬಸವ ಪ್ರಶಸ್ತಿʼಗಳು ಸಿಕ್ಕಿವೆ.
ಸಾಕಷ್ಟು ಕಡು ಬಡತನದಲ್ಲಿ ಹುಟ್ಟಿರುವ ಇಮಾಮಸಾಬ ಅವರು, ತಮ್ಮ 11ನೇ ವಯಸ್ಸಿನಲ್ಲಿ ನರಗುಂದದ ಸಿಂಗಾಡೆ ಎಂಬ ಹಾಲುಮತದ ಮನೆತನವೊಂದರಲ್ಲಿ ಜೀತಕ್ಕೆ ಇದ್ದರು. ಅಲ್ಲಿ ಕುರಿ ಕಾಯುವ ಕೆಲಸದಲ್ಲಿ ಇಮಾಮಸಾಬ ತೊಡಗುತ್ತಿದ್ದರು. ಆ ಸಂದರ್ಭದಲ್ಲಿ ಕುರಿ ಕಾಯುತ್ತಾ ಹೊರಟಾಗ ಪದಗಳ ರಚನೆ ಮಾಡುತ್ತಾ, ಹಾಡುತ್ತಾ ಹೊರಟ ಇಮಾಮಸಾಬ ಜಾನಪದ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.