ಬಜೆಟ್ ಮಂಡನೆ ವೇಳೆ ʼಒಳ ಮೀಸಲಾತಿ’ಗಾಗಿ ವೀಕ್ಷಕರ ಗ್ಯಾಲರಿಯಲ್ಲಿ ಘೋಷಣೆ

ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಹದಿನಾರನೇ ಮುಂಗಡಪತ್ರ ಮಂಡನೆ ವೇಳೆ ವಿಧಾನಸಭೆ ವೀಕ್ಷಕರ ಗ್ಯಾಲರಿಯಲ್ಲಿ ಇಬ್ಬರು ವ್ಯಕ್ತಿಗಳು ಪರಿಶಿಷ್ಟರ ಒಳಮೀಸಲಾತಿಗಾಗಿ ಆಗ್ರಹಿಸಿ ಘೋಷಣೆ ಕೂಗಿದ ಪ್ರಸಂಗ ನಡೆಯಿತು.
ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಬಜೆಟ್ ಮಂಡನೆ ಆಲಿಸುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ಏಕಾಏಕಿ ಒಳ ಮೀಸಲಾತಿಗಾಗಿ ಘೋಷಣೆ ಕೂಗಿದರು. ಇದರಿಂದ ಕ್ಷಣ ಕಾಲ ಗಲಿಬಿಲಿಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಓದುವುದನ್ನು ನಿಲ್ಲಿಸಿ, ಬಳಿಕ ಮುಂದುವರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾರ್ಷಲ್‍ಗಳು ಘೋಷಣೆ ಕೂಗಿದ ಇಬ್ಬರನ್ನು ವಶಕ್ಕೆ ಪಡೆದು ವೀಕ್ಷಕರ ಗ್ಯಾಲರಿಯಿಂದ ಹೊರಗೆ ಕರೆದುಕೊಂಡು ಹೋದರು.
ಕುಳಿತುಕೊಂಡೆ ಬಜೆಟ್ ಮಂಡನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿನೋವಿನ ಹಿನ್ನೆಲೆಯಲ್ಲಿ ಆರಂಭದಲ್ಲಿ ಸ್ವಲ್ಪ ಹೊತ್ತು ನಿಂತು ಬಜೆಟ್ ಮಂಡನೆ ಆರಂಭಿಸಿ, ಆ ಬಳಿಕ ಕುಳಿತುಕೊಂಡೇ ಬಜೆಟ್ ಪುಸ್ತಕವನ್ನು ಓದಿದರು.
Next Story