ಕರಾವಳಿ ಪ್ರವಾಸೋದ್ಯಮಕ್ಕೆ ಒತ್ತು : ಮುಖ್ಯಮಂತ್ರಿ ಸಿದ್ದರಾಮಯ್ಯ
ಕಡಲು ಕೊರೆತ ತಡೆಗಟ್ಟಲು ಸಮಗ್ರ ಯೋಜನೆ

ಬೆಂಗಳೂರು : ಮಂಗಳೂರಿನಲ್ಲಿ ಅಂತರ್‌ರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ, ಕೋಸ್ಟಲ್ ಬರ್ತ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ ಹಾಗೂ ನದಿ ಕ್ರೂಸ್ ಪ್ರವಾಸೋದ್ಯಮ ಯೋಜನೆಗಳಿಗೆ ವಿಸ್ತೃತ ಯೋಜನೆ ಸಿದ್ದಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರತಿ ವರ್ಷವೂ ಮುಂಗಾರು ಮಳೆಯ ಸಮಯದಲ್ಲಿ ಕರಾವಳಿ ತೀರದಲ್ಲಿ ಕಡಲು ಕೊರೆತದ ಘಟನೆಗಳು ಸಂಭವಿಸುವುದನ್ನು ತಡೆಗಟ್ಟಲು ಕಡಲು ಕೊರೆತದ ಪರಿಣಾಮಗಳನ್ನು ಸಮಗ್ರವಾಗಿ ಎದುರಿಸಲು ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ಅನ್ನು ಚೆನ್ನೈ ಐ.ಐ.ಟಿ ವತಿಯಿಂದ ತಯಾರಿಸಲಾಗಿದೆ. ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ (Shoreline Management Plan)ಅನ್ನು ಜಾರಿಗೊಳಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ವರದಿಯಲ್ಲಿನ ಕಡಲು ಕೊರೆತದ ತಡೆಗಟ್ಟುವ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಡಿ 200 ಕೋಟಿ ರೂ. ಖರ್ಚು ಮಾಡಲಾಗುವುದು. ಅಲ್ಲದೇ, ಮಂಗಳೂರಿನಲ್ಲಿ ಜಲಸಾರಿಗೆ ಸಂಗ್ರಹಾಲಯ ಮತ್ತು ಅನುಭವ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ :
► ವಿಜಯಪುರದಲ್ಲಿ 348 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು 2025-26ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು.
► ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.
► ಮೈಸೂರು ವಿಮಾನ ನಿಲ್ದಾಣದ ರನ್ವೇ ವಿಸ್ತರಣೆಯ ಭೂಸ್ವಾಧೀನಕ್ಕಾಗಿ 319 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
► ರಾಜ್ಯ ಸರಕಾರವು ರೈಲ್ವೆಯೊಂದಿಗೆ 50:50 ರ ಅನುಪಾತದಲ್ಲಿ ಒಂಭತ್ತು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಏಳು ಯೋಜನೆಗಳ ಭೂಸ್ವಾಧೀನದ ಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಒಟ್ಟಾರೆ 16,235 ಕೋಟಿ ರೂ. ವೆಚ್ಚದ ಈ ಯೋಜನೆಗಳಿಗೆ ರಾಜ್ಯ ಸರಕಾರದ ವತಿಯಿಂದ 9,847 ಕೋಟಿ ರೂ.ಗಳನ್ನು ವೆಚ್ಚಗೊಳಿಸಲಾಗುವುದು. 2025-26ನೇ ಆಯವ್ಯಯದಲ್ಲಿ 600 ಕೋಟಿ ರೂ. ಒದಗಿಸಲಾಗಿದೆ.
► ವಾಹನ ದಟ್ಟಣೆ ಇರುವ ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್‍ಗಳ ಬದಲಿಗೆ ರಸ್ತೆ ಮೇಲ್ಸೇತುವೆ/ಕೆಳಸೇತುವೆ ನಿರ್ಮಿಸಲು ಈಗಾಗಲೇ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 50 ಕೋಟಿ ರೂ.ಒದಗಿಸಲಾಗಿದೆ.
► ಬೈಯ್ಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣ ಯೋಜನೆಗಳಡಿಯಲ್ಲಿ 70 ಕಿ.ಮೀ ರೈಲ್ವೆ ಲೈನ್‍ಗಳನ್ನು ದ್ವಿಪಥೀಕರಣಗೊಳಿಸಲು ಒಟ್ಟಾರೆ 812 ಕೋಟಿ ರೂ. ಅಂದಾಜಿಸಲಾಗಿದೆ. ಇದಕ್ಕೆ ರಾಜ್ಯ ಸರಕಾರದ ವತಿಯಿಂದ 406 ಕೋಟಿ ರೂ. ಒದಗಿಸಲಾಗುತ್ತಿದೆ.
► ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು 15,767 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು 58 ರೈಲ್ವೆ ನಿಲ್ದಾಣಗಳು ಹಾಗೂ 148 ಕಿ.ಮೀ ಉದ್ದದ ರೈಲ್ವೆ ಜಾಲವನ್ನು ಹೊಂದಿದೆ. ನಾಲ್ಕು ಕಾರಿಡಾರ್ ಗಳನ್ನೊಳಗೊಂಡ ಈ ಯೋಜನೆಯ ಎರಡು ಕಾರಿಡಾರ್‍ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನುಳಿದ ಎರಡು ಕಾರಿಡಾರ್‍ಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುವುದು.