ರಾಜ್ಯ ಬಜೆಟ್ | ದುರ್ಬಲರಿಗೆ ವಸತಿ ಕಲ್ಪಿಸಲು ಯೋಜನೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಸರಕಾರದ ಭೂಮಿಯನ್ನು ಬಳಸಿ ಖಾಸಗಿ ಸಹಭಾಗಿತ್ವದೊಂದಿಗೆ ವಸತಿ ಘಟಕಗಳನ್ನು ನಿರ್ಮಿಸಿ, ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಹಂಚಿಕೆ ಮಾಡಲು ಯೋಜನೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಬಜೆಟ್ ಮಂಡಿಸಿದ ಅವರು, ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಎಎಚ್‍ಪಿ ಮನೆಗಳ ಫಲಾನುಭವಿಗಳಿಗೆ ಸಾಲದ ಮೇಲಿನ ಬಡ್ಡಿ ಹೊರೆಯನ್ನು ಕಡಿಮೆ ಮಾಡಲು ‘ಬಡ್ಡಿ ಸಹಾಯಧನ’ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಪ್ರಧಾನಿ ಆವಾಸ್ ಯೋಜನೆ ಅಡಿಯಲ್ಲಿ ಒಟ್ಟಾರೆ 1,80,253 ಮನೆಗಳ ಗುರಿಯನ್ನು ಅನುಮೋದಿಸಲಾಗಿದೆ. ಈ ಮನೆಗಳಿಗೆ ಫಲಾನುಭವಿಗಳ ವಂತಿಕೆಯನ್ನು ಒಂದು ಲಕ್ಷಗಳಿಗೆ ಇಳಿಕೆ ಮಾಡಲಾಗಿದ್ದು, ರಾಜ್ಯ ಸರಕಾರವು ಐದು ಲಕ್ಷಗಳನ್ನು ಫಲಾನುಭವಿಗಳ ಪರವಾಗಿ ಭರಿಸುತ್ತಿದೆ. ಈಗಾಗಲೇ, 86,651 ಮನೆಗಳು ಪೂರ್ಣಗೊಂಡಿರುತ್ತವೆ. ಉಳಿದ ಮನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಗೃಹ ಮಂಡಳಿಯಿಂದ ಆನೇಕಲ್ ತಾಲ್ಲೂಕಿನ ಸೂರ್ಯ ನಗರದ 4ನೇ ಹಂತದ ಯೋಜನೆಯಡಿ 16,140 ನಿವೇಶನಗಳನ್ನು 2025-26ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಲಾಗುವುದು. 50:50 ಅನುಪಾತದ ಪಾಲುದಾರಿಕೆಯಡಿ ಭೂ ಮಾಲಕರ ಪಾಲಿನ ನಿವೇಶನಗಳನ್ನು ನೀಡಿ, ಉಳಿದ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಲಕ್ಷ ವಂತಿಕೆ ಕಡಿತ: ‘ರಾಜೀವ್‍ಗಾಂಧಿ ವಸತಿ ನಿಗಮದಿಂದ ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸಲಾದ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಯೋಜನೆಯಡಿ, ಈಗಾಗಲೇ ಠೇವಣಿ ಮೊತ್ತವನ್ನು ಪಾವತಿಸಿರುವ 12,153 ಫಲಾನುಭವಿಗಳಿಗೆ ಅವರ ವಂತಿಕೆಯ ಮೊತ್ತದಲ್ಲಿ ಒಂದು ಲಕ್ಷಗಳನ್ನು ಕಡಿತಗೊಳಿಸಿ ರಾಜ್ಯ ಸರಕಾರದಿಂದ 121ಕೋಟಿ ರೂ. ಭರಿಸಲಾಗುವುದು’ ಎಂದು ಸಿದ್ದರಾಮಯ್ಯ ತಿಳಿಸಿದರು.