37 ಲಕ್ಷ ರೈತರಿಗೆ 28 ಸಾವಿರ ಕೋಟಿ ರೂ.ಸಾಲ : ಸಿದ್ಧರಾಮಯ್ಯ

ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ ಸಹಕಾರ ಬ್ಯಾಂಕುಗಳ ಮೂಲಕ 28 ಸಾವಿರ ಕೋಟಿ ರೂ. ಸಾಲವನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಆಯವ್ಯಯ ಮಂಡಿಸಿದ ಅವರು, 2024-25ನೆ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ. ರಿಯಾಯತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ನಬಾರ್ಡ್ ಶೇ.58ರಷ್ಟು ಕಡಿಮೆ ಮಾಡಿದ್ದರೂ ಸಹ, ನಿಗದಿತ ಗುರಿಯನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪ್ರಕಟಿಸಿದರು.
2023-24ನೆ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದಂತೆ, ಡಿಸಿಸಿ ಹಾಗೂ ಪಿಕಾರ್ಡ್ ಬ್ಯಾಂಕುಗಳಿಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ 240 ಕೋಟಿ ರೂ. ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಯಶಸ್ವಿನಿ ಯೋಜನೆಯಡಿ ಇಲ್ಲಿಯವರೆಗೆ 700 ನೆಟ್ವರ್ಕ್ ಆಸ್ಪತ್ರೆಗಳು ನೋಂದಣಿಯಾಗಿದ್ದು, ಈ ಆಸ್ಪತ್ರೆಗಳಲ್ಲಿ ಇದುವರೆಗೂ ರಾಜ್ಯಾದ್ಯಂತ 59,000 ಫಲಾನುಭವಿಗಳು 103 ಕೋಟಿ ರೂ. ಮೊತ್ತದ ಚಿಕಿತ್ಸೆ ನೀಡಲಾಗಿದೆ ಎಂದರು.
ಸಹಕಾರ ಕ್ಷೇತ್ರಕ್ಕೂ ಕೊಡುಗೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗ¼ ಕೇಂದ್ರ ಪುರಸ್ಕೃತ ಗಣಕೀಕರಣ ಯೋಜನೆಯಡಿ 93 ಕೋಟಿ ರೂ.ಗಳಷು ಬಿಡುಗಡೆ ಮಾಡಿ, ರಾಜ್ಯದಲ್ಲಿ 110 ಸಂಘಗಳ ಗಣಕೀಕರಣವನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 3 ಸಾವಿರ ಸಂಘಗಳ ಗಣಕೀಕರಣ
* ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್‍ಗೆ 7,550 ರೂ. ಜೊತೆಗೆ ರಾಜ್ಯ ಸರಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರೂ.ಗಳಂತೆ ಒಟ್ಟು 138 ಕೋಟಿ ರೂ.
* ಆನ್‍ಲೈನ್‍ನಲ್ಲಿಯೇ ನೊಂದಾಯಿತ ಗೃಹ ನಿರ್ಮಾಣ ಸಹಕಾರ ಸಂಘಗಳ ಮಾಹಿತಿ
* ಠೇವಣಿದಾರರ ಹಿತಾಸಕ್ತಿ ಕಾಪಾಡಲು ಹಾಗೂ ಅವ್ಯವಹಾರವನ್ನು ತಡೆಯಲು ಸಹಾಯವಾಣಿ ಪ್ರಾರಂಭ
* ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರದಿ ಡಿಜಿಟಲೀಕರಣ
* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿರುವ ಶ್ರಮಿಕರು ಮೃತರಾದಾಗ ಅವರ ವಾರಸುದಾರರಿಗೆ ವಿಮಾ ಮೊತ್ತ 1ಲಕ್ಷದಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳ
* ಬೆಂಗಳೂರಿನಲ್ಲಿರುವ ಮಾರುಕಟ್ಟೆ ಸಮಿತಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಬೆಂಗಳೂರಿನ ಹೊರವಲಯದಲ್ಲಿ ಹೊಸ “ಸ್ಯಾಟ್‍ಲೈಟ್ ಮಾರ್ಕೆಟ್” ಸ್ಥಾಪನೆ
* 25 ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆ ಸ್ಥಾಪನೆ
* ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆ ಉತ್ತೇಜಿಸಲು 10 ಕೋಟಿ ರೂ.
* ಕಲಬುರಗಿಯಲ್ಲಿ ನೂತನ ಮೆಗಾ ಡೈರಿಯನ್ನು ಪ್ರಾರಂಭಿಸಲು 50 ಕೋಟಿ ರೂ.
* ಕಲಬುರಗಿಯಲ್ಲಿ ಪ್ರಾದೇಶಿಕ ಸಹಕಾರ ಭವನ ನಿರ್ಮಾಣಕ್ಕೆ 10 ಕೋಟಿ ರೂ.
* ಗ್ರಾಮೀಣ ಉಗ್ರಾಣಗಳ ನಿರ್ಮಾಣಕ್ಕೆ 60 ಕೋಟಿ ರೂ.
* ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಅನುವಾಗುವಂತೆ ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ ಮತ್ತು ಮೇಕೆ ಮಾರುಕಟ್ಟೆ ಪ್ರಾರಂಭ
* ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪನೆ
* ಕೆಜಿಎಫ್‍ನಲ್ಲಿ ರೈತರ ಆಧುನಿಕ ಮಾರುಕಟ್ಟೆ ಸ್ಥಾಪನೆ