ಬಿಯಾಂಡ್ ಬೆಂಗಳೂರು ಉದ್ಯಮ ಶೀಲತೆ ಉತ್ತೇಜಿಸಲು 1000 ಕೋಟಿ ರೂ. : ಸಿದ್ದರಾಮಯ್ಯ

ಬೆಂಗಳೂರು : ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿಯೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1,000 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ-ಎಲ್‍ಇಎಪಿ ಅನ್ನು ಪ್ರಾರಂಭಿಸಲಾಗುವುದು. ಇದಕ್ಕೆ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ.
ಈ ಕಾರ್ಯಕ್ರಮಗಳಿಂದ ರಾಜ್ಯಾದ್ಯಂತ ಐದು ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಮೈಸೂರು, ಮಂಗಳೂರು-ಉಡುಪಿ-ಮಣಿಪಾಲ್, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಇನ್ಕ್ಯುಬೇಟರ್‍ಗಳು, ಆಕ್ಸಿಲರೇಟರ್‍ಗಳು, ಉತೃಷ್ಟತಾ ಕೇಂದ್ರಗಳು ಮತ್ತು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಲೈಫ್ಸೈಕಲ್ ವಿಧಾನ ಅನುಸರಿಸಲಾಗುವುದು.
ಡೀಪ್-ಟೆಕ್ ಅಭಿವೃದ್ಧಿಗಾಗಿ 100 ಕೋಟಿ ರೂ. ಕಾರ್ಪಸ್ ನಿಧಿ ಹಾಗೂ 300 ಕೋಟಿ ರೂ.ಗಳ ಫಂಡ್ ಆಫ್ ಫಂಡ್ ಸ್ಥಾಪನೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹೊಸ ಐ.ಟಿ ನೀತಿ 2025ನೇ ಸಾಲಿನಲ್ಲಿ ಜಾರಿ. ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕೇತ್ರದಲ್ಲಿ ಪಾರಮ್ಯ ಸಾಧಿಸಲು ಮುಂದಿನ ಐದು ವರ್ಷಗಳಲ್ಲಿ 50 ಕೋಟಿ ರೂ. ಹೂಡಿಕೆಯೊಂದಿಗೆ ಸೆಂಟರ್ ಫಾರ್ ಅಪ್ಲೈಡ್ ಎಐ ಫಾರ್ ಟೆಕ್ ಸಲ್ಯೂಷನ್ಸ್(ಸಿಎಟಿಎಸ್) ಸ್ಥಾಪನೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸಲು ಕ್ವಾಂಟಮ್ ರಿಸರ್ಚ್ ಪಾರ್ಕ್ ಹಂತ-2ಅನ್ನು 48 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸ್ಥಾಪನೆ.
ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 2024-2029, ಎಂ.ಎಸ್.ಎಂ.ಇ ಮತ್ತು ದೊಡ್ಡ ಉದ್ಯಮ ವಿಭಾಗದಲ್ಲಿ 1,500 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಉದ್ದೇಶ ಹೊಂದಲಾಗಿದ್ದು, 220 ಕೋಟಿ ರೂ. ಪ್ರೋತ್ಸಾಹದ ಮೂಲಕ ಜಾರಿಗೆ ತರಲಾಗುವುದು.
ಬೆಂಕಿ ಅನಾಹುತದಲ್ಲಿ ತೀವ್ರ ಹಾನಿ ಸಂಭವಿಸಿದ ಬೆಂಗಳೂರು ಬಯೋ-ಇನ್ನೋವೇಷನ್ ಸೆಂಟರ್‍ನ ಪುನರ್ ನಿರ್ಮಾಣಕ್ಕೆ ಒಟ್ಟು 57 ಕೋಟಿ ರೂ. ನೆರವು ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಅದಕ್ಕೆ 20 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಜಾಗತಿಕ ಸಾಮರ್ಥ್ಯ ಕೇಂದ್ರಗಳ ವಲಯದಲ್ಲಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು, ಕಿಯೋನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ ಅನ್ನು ಮೈಸೂರು, ಬೆಳಗಾವಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುವುದು.
ಕೋಲಾರ, ರಾಮನಗರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 9 ಕೋಟಿ ರೂ. ಒದಗಿಸಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಮೈಸೂರಿನ 150 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಕರ್ನಾಟಕದಲ್ಲಿ ಸಂವೇದಕಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಕೈಗಾರಿಕೆಗಳ ಮತ್ತು ಭಾರತ ಸರಕಾರದ ಸಹಭಾಗಿತ್ವದಲ್ಲಿ ಸೆನ್ಸರ್‍ಟೆಕ್ ಇನ್ನೋವೇಶನ್ ಹಬ್ ಅನ್ನು ಒಟ್ಟು 99 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ಕಿಯೋನಿಕ್ಸ್ ವತಿಯಿಂದ ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳನ್ನೊಳಗೊಂಡ ಮೂರು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ ಗಳನ್ನು ಸ್ಥಾಪಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣದ ಅಗತ್ಯವಿರುವುದರಿಂದ ಕಲಬುರಗಿಯಲ್ಲಿ ಅಗ್ರಿ-ಟೆಕ್ ವೇಗವರ್ಧಕ ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಕಲಬುರಗಿಯಲ್ಲಿ ಪ್ಲಗ್ ಅಂಡ್ ಪ್ಲೇ ಸೌಲಭ್ಯವಿರುವ ಫ್ಲಾಟ್ ಫ್ಯಾಕ್ಟರಿ ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.