ಬೊಳುವಾರು ಮುಹಮ್ಮದ್ ಕುಂಞ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿ ನಾಟಕ ರೂಪದಲ್ಲಿ ಪ್ರದರ್ಶನ : ಸಿದ್ದರಾಮಯ್ಯ

ಬೆಂಗಳೂರು : ಬಾದಾಮಿಯ ಚಾಲುಕ್ಯ ಉತ್ಸವದಲ್ಲಿ ನೃತ್ಯೋತ್ಸವ ಕಾರ್ಯಕ್ರಮ 2 ಕೋಟಿ ರೂ. ವೆಚ್ಚದಲ್ಲಿ ಆಯೋಜನೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಯನ್ನು 1 ಕೋಟಿ ರೂ. ವೆಚ್ಚದಲ್ಲಿ ನಾಟಕ ರೂಪದಲ್ಲಿ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ.
‘ಕನ್ನಡ ಭಾರತಿ’ ಎನ್ನುವ ಪುಸ್ತಕ ಮಾಲಿಕೆಯಡಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಶ್ರೇಷ್ಠ ಸಾಧಕರ ಜೀವನವನ್ನು ಪರಿಚಯಿಸುವ ಪುಸ್ತಕಗಳನ್ನು 50 ಲಕ್ಷ ರೂ. ಗಳಲ್ಲಿ ಪ್ರಕಟಿಸಲಾಗುವುದು. ದಾವಣಗೆರೆಯ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ಸ್ಥಾಪಿಸಲಾಗಿರುವ ವೃತ್ತಿರಂಗಭೂಮಿ ರಂಗಾಯಣದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ, ವೃತ್ತಿ ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣ.
ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2,000 ರೂ. ಗಳಿಂದ 2,500 ರೂ. ಗಳಿಗೆ ಹೆಚ್ಚಳ. ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು, ಬೆಂಗಳೂರಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಒಂದು ಕೋಟಿ ರೂ., ಸೇವಾದಳ ಸಂಸ್ಥಾಪಕ ಹಾಗೂ ಸ್ವಾತಂತ್ರ್ಯ ಸೇನಾನಿ ಪದ್ಮಭೂಷಣ ಡಾ.ಎನ್.ಎಸ್.ಹರ್ಡೀಕರ್ ರವರ ಸ್ಮಾರಕವನ್ನು ಬೆಳಗಾವಿ ಜಿಲ್ಲೆಯ ಘಟಪ್ರಭಾದ ಆರೋಗ್ಯ ಧಾಮದಲ್ಲಿ ನಿರ್ಮಿಸಲು ಎರಡು ಕೋಟಿ ರೂ. ಅನುದಾನ.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಮೈಸೂರಿನ ರಂಗಾಯಣದ ಕಾರ್ಯಚಟುವಟಿಕೆಗಳಿಗೆ ಎರಡು ಕೋಟಿ ರೂ., ಸಂತ ಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರಕ್ಕೆ ತತ್ವಪದ ಪಾರಿಭಾಷಿಕ ಪದಕೋಶದ ಸಿದ್ಧತೆ ಮತ್ತು ಪ್ರಕಟಣೆ ಕಾರ್ಯಕ್ಕಾಗಿ ಒಂದು ಕೋಟಿ ರೂ. ಅನುದಾನ, ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಪ್ರಾಧಿಕಾರ ಸ್ಥಾಪನೆ. ಜೊತೆಗೆ, ಅವರು ವ್ಯಾಸಂಗ ಮಾಡಿದ ಗೌರಿಬಿದನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉನ್ನತೀಕರಣ.
ಸೌಹಾರ್ದತೆಗೆ ಒತ್ತು: ‘ಮತೀಯವಾದದಿಂದ ಪ್ರಭಾವಿತವಾಗುತ್ತಿರುವ ಇಂದಿನ ಯುವಜನತೆಗೆ ಸಾಮರಸ್ಯದಿಂದ ಬದುಕುವಂತೆ ಪ್ರೇರೇಪಿಸುವ ರಾಮ್ ಮನೋಹರ್ ಲೋಹಿಯಾ ಹಾಗೂ ಇತರ ಮಹನೀಯರ ಪುಸ್ತಕಗಳಲ್ಲಿನ ಸೌಹಾರ್ದತೆಯ ಅಂಶಗಳನ್ನು ಕ್ರೋಢೀಕರಿಸಿ ಕನ್ನಡ ಭಾಷೆಯಲ್ಲಿ ಪ್ರಕಟಿಸಲಾಗುವುದು. ಈ ಕುರಿತು ಕಮ್ಮಟ, ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು’
-ಸಿದ್ದರಾಮಯ್ಯ, ಮುಖ್ಯಮಂತ್ರಿ