ʼಕೃಷಿ ಅರಣ್ಯ ಮತ್ತು ಕಾರ್ಬನ್ ಕ್ರೆಡಿಟ್ʼ ನೀತಿ ಜಾರಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೃಷಿ ಅರಣ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಇಂಗಾಲದ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿರುವ ಸಸ್ಯ ಪ್ರಭೇದಗಳನ್ನು ಬೆಳೆಸಲು ‘ಕೃಷಿ ಅರಣ್ಯ ಮತ್ತು ಕಾರ್ಬನ್ ಕ್ರೆಡಿಟ್’ ನೀತಿಯ ಮೂಲಕ ರೈತರ ಆರ್ಥಿಕ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಶುಕ್ರವಾರ ಆಯವ್ಯಯ ಮಂಡನೆ ಮಾಡಿದ ಅವರು, ವಿವಿಧ ಕಾರ್ಯಕ್ರಮದಡಿ ಅರಣ್ಯ ಪ್ರದೇಶದಲ್ಲಿ 28,494 ಹೆಕ್ಟೇರ್‍ನಲ್ಲಿ 213 ಲಕ್ಷ ಸಸಿಗಳನ್ನು ಹಾಗೂ ಅರಣ್ಯೇತರ ಪ್ರದೇಶದಲ್ಲಿ 1,200 ಹೆಕ್ಟೇರ್‍ನಲ್ಲಿ 3.50 ಲಕ್ಷ ಸಸಿಗಳನ್ನು ಬೆಳೆಸಿ ನೆಡುತೋಪುಗಳನ್ನು ನಿರ್ವಹಣೆ ಮಾಡುವ ಮೂಲಕ ‘ಹಸಿರು ಕವಚ’ವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯ ಪರಿಣಾಮವನ್ನು ನಿಯಂತ್ರಿಸಲು ಪರಿಸರದ ಮೇಲೆ ಕಾಳಜಿ ಹೊಂದಿರುವ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ಸಹಯೋಗದೊಂದಿಗೆ ‘ಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನ’ವನ್ನು ರಚಿಸಿ, ಸಿಎಸ್‍ಆರ್ ಕೊಡುಗೆ ಮತ್ತು ದೇಣಿಗೆ ಮೂಲಕ ಪರಿಸರ ಅಭಿವೃದ್ಧಿಗೆ ಅನುಕೂಲ ಕಲ್ಪಿಸಲಾಗುವುದು. ಹವಾಮಾನ ವೈಪರೀತ್ಯದ ಅಪಾಯಗಳನ್ನು ತಗ್ಗಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ ‘ಕರ್ನಾಟಕ ರಾಜ್ಯ ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ’ಯನ್ನು ಪ್ರಸಕ್ತ ಸಾಲಿನಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವನ್ಯ ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ದಯಾತ್ಮಕ ಧನವನ್ನು 15 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಕೃಷಿ ಭೂಮಿಯಲ್ಲಿ ಸಾಗುವಾನಿ ಮತ್ತು ಇತರೆ ಬೆಲೆ ಬಾಳುವ ಮರಗಳನ್ನು ಬೆಳೆಸಲು ಉತ್ತೇಜನ ನೀಡಲು ಪ್ರಸ್ತುತ ಇರುವ ಸಾಗಾಣಿಕೆ ನಿಯಮಾವಳಿಗಳನ್ನು ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾಡಾನೆ ಹಾಗೂ ಚಿರತೆ ಹಾವಳಿಯನ್ನು ನಿಯಂತ್ರಿಸಲು ಈಗಾಗಲೇ ಎಂಟು ಆನೆ ಕಾರ್ಯಪಡೆ ಹಾಗೂ ಎರಡು ಚಿರತೆ ಕಾರ್ಯಪಡೆಗಳನ್ನು ರಚಿಸಿದ್ದು, ಪ್ರಸಕ್ತ ಸಾಲಿನಲ್ಲಿ 17 ಕೋಟಿ ರೂ. ಒದಗಿಸುವ ಮೂಲಕ ಕಾರ್ಯ ಯೋಜನೆಯನ್ನು ಮುಂದುವರೆಸಲಾಗುವುದು. ಮಾನವ-ಆನೆ ಸಂಘರ್ಷ ತಡೆಗಟ್ಟಲು ಇನ್ನೂ 150 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿಗಳಿಗಾಗಿ 2025-26ನೇ ಸಾಲಿನಲ್ಲಿ 60 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮಾನವ-ಆನೆ ಸಂಘರ್ಷದ ಸಮಸ್ಯೆಯನ್ನು ಪರಿಹರಿಸಲು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 20 ಚದರ ಕಿ.ಮೀ ವ್ಯಾಪ್ತಿಯಲ್ಲಿ ‘ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ’ ಸ್ಥಾಪನೆಗೆ 20 ಕೋಟಿ ರೂ. ಅನುದಾನ, ಅರಣ್ಯದಲ್ಲಿ ಬೆಳೆದಿರುವ ಲಂಟಾನ ಮತ್ತು ಯುಫಟೋರಿಯಂ ಕಳೆಗಳನ್ನು ನರೇಗಾ ಯೋಜನೆಯ ಸಹಯೋಗದೊಂದಿಗೆ ಸ್ವಚ್ಛಗೊಳಿಸಿ ವನ್ಯ ಪ್ರಾಣಿಗಳಿಗೆ ಪೂರಕವಾದ ಹುಲ್ಲು ಬೆಳೆಯಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.