ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಭೂ ಕುಸಿತ ತಡೆಗೆ 200 ಕೋಟಿ ರೂ.

ಬೆಂಗಳೂರು : ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅನುದಾನದಡಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಭೂ ಕುಸಿತ ತಡೆಯಲು ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಪ್ರಕಟಿಸಿದ್ದಾರೆ.
ಬೆಂಗಳೂರು ನಗರದಲ್ಲಿ 239 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿಗಳ ಪುನರ್ ನಿರ್ಮಾಣ ಮತ್ತು ಕೆರೆಗಳ ಪುನಃಶ್ಚೇತನ. ಬರ ಉಪಶಮನಕ್ಕಾಗಿ 100 ಕೋಟಿ ರೂ. ವೆಚ್ಚದಲ್ಲಿ ಕೃಷಿ ಹೊಂಡಗಳ ನಿರ್ಮಾಣ. ಕರಾವಳಿ ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ಕೊರೆತ ತಗ್ಗಿಸುವುದು. ನವಲಗುಂದ ತಾಲೂಕಿನ ಬೆಣ್ಣೆಹಳ್ಳದಲ್ಲಿ ಪ್ರವಾಹ ನಿಯಂತ್ರಿಸಲು ಉಪಶಮನ ಕ್ರಮಗಳನ್ನು 200 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಿರುವ ಕಾಮಗಾರಿಗಳ ಅನುಷ್ಠಾನ. ರೋಣ ತಾಲೂಕಿನ ಕೋಟುಮಚಗಿ ಗ್ರಾಮದಿಂದ ಕೊಪ್ಪಳ ಜಿಲ್ಲೆಯ ವೀರಾಪುರ ಗ್ರಾಮದವರೆಗೆ ಹಿರೇಹಳ್ಳದಲ್ಲಿ ಹೂಳೆತ್ತುವ ಮೂಲಕ 60 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ನಿಯಂತ್ರಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.
ಇತರೆ ಘೋಷಣೆಗಳು: ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ಪ್ರಸಕ್ತ ಸಾಲಿನಲ್ಲಿ ಇ-ಪೌತಿ ಆಂದೋಲನ ಜಾರಿ. ಗ್ರಾಮ ಹಾಗೂ ತಾಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ಜಮಾಬಂದಿ ಪ್ರಕ್ರಿಯೆಯನ್ನು ವೇಗವಾಗಿ ನಿರ್ವಹಿಸಲು ಇ-ಜಮಾಬಂದಿ ತಂತ್ರಾಂಶ ಅಭಿವೃದ್ಧಿ.
ಹೊಸ ಭೂ-ಕಂದಾಯ ಕಾಯ್ದೆ ಜಾರಿ. ಬೆಳಗಾವಿ ನಗರದಲ್ಲಿ 55 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಚೆÉೀರಿ ಕಟ್ಟಡ ನಿರ್ಮಾಣ. ರೈತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಮರ್ಪಕ ಸೌಲಭ್ಯಗಳನ್ನೊಳಗೊಂಡ ಹೊಸ 100 ನಾಡ ಕಚೇರಿಗಳ ನಿರ್ಮಾಣ. 2025-26ನೇ ಸಾಲಿನಲ್ಲಿ 21 ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿವೃದ್ಧಿ ಕಾರ್ಯಗಳಿಗಾಗಿ 34 ಕೋಟಿ ರೂ. ಅನುದಾನ.
ಕೇಂದ್ರ ಸರಕಾರದ ಸಹಯೋಗದೊಂದಿಗೆ ‘ನಕ್ಷಾ’ ಯೋಜನೆಯಡಿಯಲ್ಲಿ ಪ್ರಾರಂಭಿಕವಾಗಿ ರಾಜ್ಯದ 10 ನಗರಸಭೆ/ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳನ್ನು ಡ್ರೋನ್ ಬಳಸಿ ಸರ್ವೆ ಮಾಡುವ ಮೂಲಕ ಡಿಜಿಟಲೀಕರಣ. ಸಾಮಾಜಿಕ ಭದ್ರತಾ ಪಿಂಚಣಿ ಮಂಜೂರಾತಿ ಸೇವೆಯನ್ನು ನೀಡಲು ಪ್ರಸ್ತುತ ಇರುವ ಕಾಲಮಿತಿಯನ್ನು 45 ದಿನಗಳಿಂದ 21 ದಿನಗಳಿಗೆ ಇಳಿಕೆ.
3,500 ಕೋಟಿ ರೂ. ವಿಶ್ವಬ್ಯಾಂಕ್ ಸಾಲ ಹಾಗೂ ರಾಜ್ಯ ಸರಕಾರದ 1,500 ಕೋಟಿ ರೂ. ಸೇರಿ ಒಟ್ಟು 5,000 ಕೋಟಿ ರೂ. ವೆಚ್ಚದಲ್ಲಿ 2025-2031ರ ಅವಧಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2,000 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ನಿರ್ವಹಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 1,070 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ಒಳಚರಂಡಿ ಪಂಪಿಂಗ್ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.
ವಿಪತ್ತು ನಿರ್ವಹಣೆಯ ಸಾಂಸ್ಥಿಕ ಸುಧಾರಣೆ ಕ್ರಮಗಳಿಗೆ 1,680 ಕೋಟಿ ರೂ.ಒದಗಿಸಲಾಗುವುದು. ಇದರಡಿಯಲ್ಲಿ ಶಾಸನ ರಚನೆ, ಅಂತರ್‍ರಾಷ್ಟ್ರೀಯ ಉತ್ಕಷ್ಟೃತಾ ಕೇಂದ್ರ, ವಿಪತ್ತು ಅನುಭವ ಕಲಿಕಾ ಕೇಂದ್ರ ಸ್ಥಾಪನೆ, ವಿಪತ್ತು ಮುನ್ನೆಚ್ಚರಿಕೆ ನೀಡಲು ಕರ್ನಾಟಕ ಮಲ್ಟಿ ರಿಸ್ಕ್ ಹಝಾರ್ಡ್ ಇನ್ಫಾರ್ಮೇಷನ್ ಸಿಸ್ಟಮ್, 1950 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳ ಸ್ಥಾಪನೆ ಹಾಗೂ ಭೂ ಕುಸಿತ ಉಪಶಮನ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.
ವಿಪತ್ತು ಉಪಶಮನ ಕಾರ್ಯಕ್ರಮದಡಿ ಸಣ್ಣ ನೀರಾವರಿ ಇಲಾಖೆಯು 250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 41 ಕೆರೆ ತುಂಬಿಸುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲಿದೆ. ಕಾವೇರಿ-2.0 ತಂತ್ರಾಂಶದ ಮೂಲಕ ಸರಕಾರದ ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಜಾರಿ. ಬೆಂಗಳೂರಿನ 36 ನೋಂದಣಿ ಕಚೇರಿಗಳನ್ನು 76 ಕೋಟಿ ರೂ.ವೆಚ್ಚದಲ್ಲಿ ಆಧುನೀಕರಣಗೊಳಿಸಿ, ಮೂಲಭೂತ ಸೌಲಭ್ಯ ಹಾಗೂ ಉತ್ಕøಷ್ಟ ಸೇವೆ ಕಲ್ಪಿಸಲಾಗುವುದು.
ರಾಜ್ಯದಲ್ಲಿ ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಒತ್ತುವರಿ ತೆರವು. ‘ಭೂ-ವರಾಹ’ ಯೋಜನೆಯಡಿಯಲ್ಲಿ ಈ ದೇವಾಲಯಗಳ ಸ್ಥಿರಾಸ್ತಿಗಳ ದಾಖಲೀಕರಣ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 25,551 ಧಾರ್ಮಿಕ ಸಂಸ್ಥೆಗಳ/ ದೇವಾಲಯಗಳಲ್ಲಿರುವ ಅರ್ಚಕರಿಗೆ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತ 60 ಸಾವಿರ ರೂ.ಗಳಿಂದ 72 ಸಾವಿರ ರೂ.ಗಳಿಗೆ ಹೆಚ್ಚಳ.
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ಅಧಿಕಾರಿ/ನೌಕರರ ವೇತನ ಮತ್ತಿತರ ಭತ್ತೆಗಳನ್ನು ಇದುವರೆವಿಗೂ ದೇವಾಲಯಗಳ ನಿಧಿಯಿಂದ ಭರಿಸಲಾಗುತ್ತಿತ್ತು. 2025-26 ನೇ ಸಾಲಿನಿಂದ ಇವರುಗಳ ವೇತನವನ್ನು ಸರಕಾರದ ವತಿಯಿಂದ ಪಾವತಿಸಲು ಕ್ರಮವಹಿಸಲಾಗುವುದು.
ರಾಜ್ಯದಪ್ರಮುಖ 400 ದೇವಾಲಯ ಹಾಗೂ ಹೊರ ರಾಜ್ಯಗಳಲ್ಲಿರುವ ರಾಜ್ಯ ಛತ್ರಗಳಲ್ಲಿ ಲಭ್ಯವಿರುವ ಅಂದಾಜು 3,500 ಕೊಠಡಿಗಳಲ್ಲಿ ಯಾತ್ರಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಕೊಠಡಿಗಳ ಕಾಯ್ದಿರಿಸುವಿಕೆ ಹಾಗೂ ನಿರ್ವಹಣೆ ಮಾಡಲು ‘ಕರ್ನಾಟಕ ದೇವಾಲಯಗಳ ವಸತಿ ಕೋಶ’ ಸ್ಥಾಪನೆ. ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮವನ್ನು ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆ.