2025-26ನೆ ಸಾಲಿನ ಒಟ್ಟು ಬಜೆಟ್ ಗಾತ್ರ 4,09,549 ಕೋಟಿ ರೂ.: ಸಿದ್ದರಾಮಯ್ಯ

ಬೆಂಗಳೂರು 7: 2025-26ನೇ ಸಾಲಿಗೆ ಒಟ್ಟು 2,92,477ಕೋಟಿ ರೂ.ಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಇದರಲ್ಲಿ 2,08,100ಕೋಟಿ ರೂ.ಗಳ ಸ್ವಂತ ತೆರಿಗೆ ರಾಜಸ್ವ, 16,500ಕೋಟಿ ರೂ.ಗಳ ತೆರಿಗೆಯೇತರ ರಾಜಸ್ವ ಮತ್ತು ಕೇಂದ್ರ ಸರಕಾರದ ಸ್ವೀಕೃತಿ 67,877ಕೋಟಿ ರೂ.ಗಳು ಸೇರಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಪ್ರಕಟಿಸಿದ್ದಾರೆ.
2025-26ನೇ ಸಾಲಿಗೆ ಒಟ್ಟು 1.16 ಲಕ್ಷ ಕೋಟಿ ರೂ.ಗಳ ಸಾಲ ಮತ್ತು 170 ಕೋಟಿ ರೂ.ಗಳ ಋಣೇತರ ಬಂಡವಾಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಈ ಎಲ್ಲಾ ಸ್ವೀಕೃತಿಗಳು ಸೇರಿ 2025-26ನೇ ಸಾಲಿನಲ್ಲಿ ಒಟ್ಟು 4,08,647ಕೋಟಿ ರೂ.ಗಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. 2025-26ರ ಆಯವ್ಯಯದಲ್ಲಿ ಒಟ್ಟು 4,09,549ಕೋಟಿ ರೂ.ವೆಚ್ಚವನ್ನು ಅಂದಾಜಿಸಲಾಗಿದೆ, ಇದರಲ್ಲಿ 3,11,739 ಕೋಟಿ ರೂ.ರಾಜಸ್ವ ವೆಚ್ಚ, 71,336 ಕೋಟಿ ಬಂಡವಾಳ ವೆಚ್ಚ ಮತ್ತು 26,474 ಕೋಟಿ ರೂ.ಗಳ ಸಾಲ ಮರುಪಾವತಿ ಒಳಗೊಂಡಿದೆ ಎಂದು ಅವರು ಮಾಹಿತಿ ನಿಡಿದ್ದಾರೆ.
2025-26ನೇ ಸಾಲಿಗೆ, 19,262 ಕೋಟಿ ರೂ.ಗಳ ರಾಜಸ್ವ ಕೊರತೆಯನ್ನು ಅಂದಾಜಿಸಲಾಗಿದ್ದು, ಜಿ.ಎಸ್.ಡಿ.ಪಿ.ಯ ಶೇ.0.63ರಷ್ಟಿದೆ. ವಿತ್ತೀಯ ಕೊರತೆ 90,428 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜಿ.ಎಸ್.ಡಿ.ಪಿ ಯ ಶೇ.2.95ರಷ್ಟಿದೆ. 2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು 7,64,655 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜಿ.ಎಸ್.ಡಿ.ಪಿ ಯ ಶೇ. 24.91ರಷ್ಟಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
2025-26ನೇ ಸಾಲಿಗೆ ರಾಜ್ಯದ ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಗಳನ್ನು, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ಪಾಲನೆ ಮಾಡಲಾಗಿದ್ದು, ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.