ಇನ್ಫೋಸಿಸ್ ಉದ್ಯೋಗಿಗಳ ವಜಾ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಕ್ಕೆ ಕೇಂದ್ರ ಸೂಚನೆ

Photo credit: PTI
ಬೆಂಗಳೂರು: ಇನ್ಫೋಸಿಸ್ ಉದ್ಯೋಗಿಗಳ ಸಾಮೂಹಿಕ ವಜಾದ ವಿರುದ್ಧ ಸ್ವತಂತ್ರ ತಂತ್ರಜ್ಞ ಉದ್ಯೋಗಿಗಳ ಸಂಘಟನೆಯೊಂದು ನೀಡಿದ್ದ ದೂರಿಗೆ ಸಂಬಂಧಿಸಿದಂತೆ, ವ್ಯಾಜ್ಯವನ್ನು ಪರಿಹರಿಸಲು ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಗುರುವಾರ ಕೇಂದ್ರ ಕಾರ್ಮಿಕ ಸಚಿವಾಲಯವು ರಾಜ್ಯ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ.
ಕಳೆದ ತಿಂಗಳು ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ತರಬೇತಿಗೊಳಗಾಗಿದ್ದ 300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕಳೆದ ವಾರ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಇನ್ಫೋಸಿಸ್ ಒಪ್ಪಿಕೊಂಡಿತ್ತು.
ಆದರೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ದೂರು ರವಾನಿಸುವುದಕ್ಕೂ ಮುನ್ನ, ಈ ಸಂಖ್ಯೆ 700 ಎಂದು ಆರೋಪಿಸಿದ್ದ ಮಾಹಿತಿ ತಂತ್ರಜ್ಞಾನ ವಲಯದ ಕಾರ್ಮಿಕ ಸಂಘಟನೆ ನ್ಯಾಸೆಂಟ್ ಇನ್ಫರ್ಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್, ಈ ಸಂಬಂಧ ತಕ್ಷಣವೇ ಮಧ್ಯಪ್ರವೇಶಿಸಬೇಕು ಹಾಗೂ ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತ್ತು.
ನ್ಯಾಸೆಂಟ್ ಇನ್ಫರ್ಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ ನೀಡಿದ್ದ ದೂರಿನಲ್ಲಿ ಈ ಕುರಿತು ತನಿಖೆ ನಡೆಸಬೇಕು, ಈ ರೀತಿಯಲ್ಲಿ ಮತ್ತಷ್ಟು ವಜಾಗೊಳಿಸುವುದನ್ನು ತಡೆಹಿಡಿಯಲು ಇನ್ಫೋಸಿಸ್ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸಬೇಕು, ವಜಾಗೊಂಡಿರುವ ಎಲ್ಲ ಉದ್ಯೋಗಿಗಳನ್ನು ಮರು ನೇಮಕ ಮಾಡಿಕೊಳ್ಳಬೇಕು ಹಾಗೂ ಕೈಗಾರಿಕಾ ವ್ಯಾಜ್ಯಗಳು ಕಾಯ್ದೆ, 1947 ಅನ್ನು ಉಲ್ಲಂಘಿಸಿದ ಕಾರಣಕ್ಕೆ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು.
ಇದಾದ ನಂತರ, ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಇತರ ಸುದ್ದಿ ಸಂಸ್ಥೆಗಳ ವರದಿಗಳ ಪ್ರಕಾರ, ಗುರುವಾರ ತಡ ರಾತ್ರಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇನ್ಫೋಸಿಸ್ ನ ಬೆಂಗಳೂರು ಹಾಗೂ ಮೈಸೂರು ಕ್ಯಾಂಪಸ್ ಗೆ ಭೇಟಿ ನೀಡಿದ್ದರು ಎನ್ನಲಾಗಿದೆ.
ಈ ಕುರಿತು ಇನ್ಫೋಸಿಸ್ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಕಳೆದ ವಾರ, ಯಾವುದೇ ಉದ್ಯೋಗಿಯನ್ನು ಬಲವಂತವಾಗಿ ಉದ್ಯೋಗದಿಂದ ವಜಾಗೊಳಿಸಲಾಗಿಲ್ಲ ಎಂದು ಇನ್ಫೋಸಿಸ್ ಹೇಳಿತ್ತು.