ಸಂಸದ ಅನಂತ್ ಕುಮಾರ್ ಹೆಗಡೆ ರಕ್ತದಲ್ಲಿಯೇ ದ್ವೇಷವಿದೆ: ಸುಧೀರ್ ಕುಮಾರ್ ಮುರೊಳ್ಳಿ
ಬೆಂಗಳೂರು: ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕೇವಲ ಟಿಕೆಟ್ ಗಿಟ್ಟಿಸುವುದಕ್ಕಾಗಿ ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಿಲ್ಲ. ಬದಲಿಗೆ ಡಾ.ಅಂಬೇಡ್ಕರ್ ಮತ್ತು ಗಾಂಧೀಜಿ ಬಗೆಗಿನ ದ್ವೇಷ, ಆರೆಸೆಸ್ಸ್ ವ್ಯಕ್ತಿಗಳ ರಕ್ತದಲ್ಲಿಯೇ ಅಂತರ್ಗತವಾಗಿದೆ ಎಂದು ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ ಟೀಕಿಸಿದ್ದಾರೆ.
ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ‘ಜಾಗೃತ ಕರ್ನಾಟಕ ಸಂಘಟನೆ’ ಆಯೋಜಿಸಿದ್ದ ‘ಕರ್ನಾಟಕ ಪಣ-ನಾಡ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತೀಯರಾದ ನಾವು ಪ್ರಪಂಚದ ಎಲ್ಲರನ್ನೂ ಸ್ವೀಕರಿಸಿದ್ದೇವೆ. ಇಲ್ಲಿನ ಶ್ರಮಿಕರು, ಮಹಿಳೆಯರು, ರೈತರು ನಮ್ಮ ಪಾಲಿನ ಭಾರತಾಂಬೆಯಾಗಿದ್ದಾರೆ. ಈ ಥರದ ಭಾರತಾಂಬೆ ಆರೆಸ್ಸೆಸ್ ನವರಿಗೆ ಬೇಕಾಗಿಲ್ಲ. ಕೇವಲ ಭಾರತಾಂಭೆಯ ಭಾವಚಿತ್ರ ತೋರಿಸುವುದು ಮಾತ್ರ ಆರೆಸ್ಸೆಸ್ ನವರ ದೇಶಭಕ್ತಿ ಎಂದು ಟೀಕಿಸಿದರು.
ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, ಆಧ್ಯಾತ್ಮಿಕತೆ ಅರಿವು ಇದ್ದವರು ಮಾತ್ರ ಆರೆಸ್ಸೆಸ್ ನಿಂದ ಹೊರಬರಲು ಸಾಧ್ಯ. ನಾವು ಉಪನಿಷತ್ತುಗಳ ವಿರೋಧಿಗಳಲ್ಲ, ದಾಸರು, ಶರಣರು ಸೂಫಿಗಳು ಧರ್ಮವನ್ನು ಅರಿತಿದ್ದರು. ನಾವು ನೀವು ಬೇರೆಯಲ್ಲ. ಒಂದೇ ಎಂಬ ಅರಿವು ಆಳವಾಗಿ ಯಾರಿಗೂ ಮೂಡುತ್ತೋ ಅವರಿಗೆ ಮಾತ್ರ ಧರ್ಮ ಅರ್ಥವಾಗುತ್ತದೆ. ಇದು ಆರೆಸ್ಸೆಸ್ ನವರಿಗೆ ಅರ್ಥವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಶ್ರೀರಾಮಕೃಷ್ಣ ಪರಮಹಂಸರು ಜಗತ್ತಿನ ಎಲ್ಲ ಧರ್ಮಗಳ ಮೂಲಕ ಮೋಕ್ಷ ಸಾಧಿಸಬಹುದು ಎಂದು ಸಾರಿದರು. ಎಲ್ಲ ಮಾರ್ಗಗಳು ಒಂದೇ ಗುರಿಗೆ ಕರೆದುಕೊಂಡು ಹೋಗುತ್ತಿವೆ. ಒಟ್ಟಾಗಿ ಬಾಳುವುದನ್ನು ಕಲಿಸಿ ಎಂದರು. ಆದರೆ ಅದನ್ನು ಆರೆಸೆಸ್ಸ್ ಹೇಳುವುದಿಲ್ಲ ಎಂದರು.
ಎಂ.ಜಿ.ಹೆಗಡೆ ಮಾತನಾಡಿ, ಆರೆಸ್ಸೆಸ್ ನಲ್ಲಿ ವೇದ ಮತ್ತು ಉಪನಿಷತ್ತನ್ನು ಹೇಳುವುದಿಲ್ಲ. ಯಾಕೆಂದರೆ ಅದರಲ್ಲಿ ಬರೆದಿರುವುದು ಆರೆಸ್ಸೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಯಾರೂ ಶ್ರೇಷ್ಟರಲ್ಲ, ಯಾರೂ ಕನಿಷ್ಟರಲ್ಲ ಎಂದು ಉಪನಿಷತ್ತು ಹೇಳುತ್ತದೆ. ಆರೆಸ್ಸೆಸ್‍ನವರು ಇವೆಲ್ಲವನ್ನೂ ಬದಿಗಿಟ್ಟರು. ಆರೆಸೆಸ್ಸ್ ಮುಖಂಡರು ಹಿಂದೂ ಧರ್ಮದ ಅಧ್ಯಯನ ಮಾಡುವುದಿಲ್ಲ. ಅವರಿಗೆ ಎಂಬ ಪ್ರಾರ್ಥನೆ ಬರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಆರೆಸ್ಸೆಸ್‍ನ ಮಾಜಿ ಮುಖಂಡ ಹನುಮೇಗೌಡ, ಜಾಗೃತ ಕರ್ನಾಟಕದ ರಾಜಶೇಖರ್ ಅಕ್ಕಿ, ಡಾ.ವಾಸು ಎಚ್.ವಿ., ಹೇಮಾ ವೆಂಕಟ್, ಡಾ.ರಮೇಶ್ ಬೆಲ್ಲಂಕೊಂಡ, ಬಿ.ಸಿ.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
‘ಮನುಷ್ಯ ಸಂಘ ಜೀವಿಯಾಗಿರುವುದರಿಂದ ಎಲ್ಲ ಹೆಚ್ಚು ಜನ ಸೇರಿರುತ್ತಾರೋ ಆಕಡೆ ಸೆಳೆಯುತ್ತೇವೆ. ಚಿಕ್ಕ ಮಕ್ಕಳನ್ನು ಆಟ, ಹಾಡು, ಸಾಹಿತ್ಯದ ಹೆಸರಿನಲ್ಲಿ ಆರೆಸ್ಸೆಸ್‍ಗೆ ಕರೆದುಕೊಂಡು ಹೋಗಲಾಗುತ್ತದೆ. ಆರೆಸ್ಸೆಸ್ ಒಳಗೆ ಹೋದವರು ಹೊರಗೆ ಬರುವುದು ಬಹಳ ಕಷ್ಟ. ನಾನು ಕನ್ನಡ ಸಾಹಿತ್ಯ ಓದಿರುವುದರಿಂದ ಹೊರಗೆ ಬರಲು ಸಾಧ್ಯವಾಯಿತು’ ಎಂದು ಸಾಹಿತಿ ಪ್ರೊ.ಎಲ್.ಎನ್.ಮುಕುಂದರಾಜ್ ತಿಳಿಸಿದರು.
‘ನಾವು ಹಿಂದೂ ಧರ್ಮವನ್ನು ಪ್ರಶ್ನಿಸಿದರೆ ಕೆಲವರು ಮುಸ್ಲಿಮ್‍ರನ್ನು ಯಾಕೆ ಪ್ರಶ್ನಿಸುವುದಿಲ್ಲ ಎಂದು ಕೇಳುತ್ತಾರೆ. ಆದರೆ ಮುಸ್ಲಿಮ್‍ರನ್ನು ಕುರಿತು ಮಾತನಾಡಲು ನಮಗೆ ಅವರ ಬಗ್ಗೆ ಏನುಗೊತ್ತು. ಗೊತ್ತಿಲ್ಲದೆ ಪ್ರಶ್ನಿಸುವುದು ಹೇಗೆ? ಸಾ.ರಾ.ಅಬೂಬ್ಕರ್ ಅಂತವರು ಮುಸ್ಲಿಮ್‍ರನ್ನು ಪ್ರಶ್ನಿಸಿ ಸಾಕಷ್ಟು ಬರೆದಿದ್ದಾರೆ’ ಎಂದು ಹೇಳಿದರು.
‘ಆರೆಸ್ಸೆಸ್ ನವರು ಶ್ರೀರಾಮನಿಗಿಂತ ಮೊದಲು ಹೆಚ್ಚಾಗಿ ಪರಶುರಾಮನನ್ನು ಆರಾಧಿಸುತ್ತಿದ್ದರು. ಯಾಕೆಂದರೆ ಪರಶುರಾಮ ಸ್ತ್ರಿ ಸ್ವಾತಂತ್ರ್ಯ, ಶೂದ್ರರಿಂದ ಶಿಕ್ಷಣವನ್ನು ನಿರಾಕರಣೆ ಮಾಡಿದ್ದರು. ಆರೆಸ್ಸೆಸ್ ಕೂಡ ಅದೇ ಹಾದಿಯಲ್ಲಿ ಹೋಗುತ್ತಿದೆ’ ಎಂದು ಅವರು ನುಡಿದರು.