‘ಕೆಎಎಸ್’ ಮರು ಪರೀಕ್ಷೆ ನಡೆಸಲು ಅಭ್ಯರ್ಥಿಗಳ ಒತ್ತಾಯ
ಬೆಂಗಳೂರು : ವಿರೋಧದ ನಡುವೆಯೂ ಕರ್ನಾಟಕ ಲೋಕಸೇವಾ ಆಯೋಗವು ಆ.27ರಂದು ಕೆಎಎಸ್ ಪರೀಕ್ಷೆ ನಡೆಸಿದ್ದು, ಕನ್ನಡ ಅನುವಾದ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಮರು ಪರೀಕ್ಷೆಯನ್ನು ನಡೆಸುವಂತೆ ಅಭ್ಯರ್ಥಿಗಳು ಪಟ್ಟು ಹಿಡಿದಿದ್ದಾರೆ.
ಇಂಗ್ಲಿಷ್ ನಿಂದ ಕನ್ನಡ ಅನುವಾದದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಕೆಪಿಎಸ್ಸಿ ಹಾಗೂ ಸರಕಾರದ ವಿರುದ್ಧ ಪರೀಕ್ಷಾರ್ಥಿಗಳು ಅಸಮಾಧನ ವ್ಯಕ್ತಪಡಸಿದ್ದಾರೆ. ಪ್ರಶ್ನೆಪತ್ರಿಕೆಯ ಕನ್ನಡ ಅನುವಾದದಲ್ಲಿ ತಪ್ಪುಗಳು, ಒಟ್ಟು 58 ಪ್ರಶ್ನೆಗಳಲ್ಲಿ ತಪ್ಪಾಗಿರುವುದು ತಿಳಿದು ಬಂದಿದೆ.
ಎಪ್ರಿಲ್ ತಿಂಗಳಲ್ಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯಾಗುತ್ತಿದೆ. ಸರಕಾರಿ ನಿಯಮಗಳ ಪ್ರಕಾರ ಪರೀಕ್ಷೆಯ ಒಂದು ವಾರ ಮುಂಚೆ ಸಿದ್ಧಪಡಿಸಬೇಕು. ವಾರದ ಮಧ್ಯ ಕೆಲಸದ ದಿನ ಪರೀಕ್ಷೆ ನಿಗದಿ, ಸಾಮಾನ್ಯವಾಗಿ ರವಿವಾರ ನಡೆಯುತ್ತಿತ್ತು. ಆದರೆ ರಜೆಯಲ್ಲದೆ ದಿನ ಪರೀಕ್ಷೆ ನಡೆಸಲಾಗಿದೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿದ್ದಾರೆ.
ಆಯೋಗವು ಕೀ ಉತ್ತರಗಳನ್ನು ಪ್ರಕಟಿಸಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಬೇಕೆಂದರೆ ಪ್ರತಿ ಪ್ರಶ್ನೆಗೆ 50 ರೂ. ಕಟ್ಟಬೇಕು. ಅಲ್ಲದೆ ಆಕ್ಷೇಪಣೆ ಸಲ್ಲಿಸಲು ಪೋಸ್ಟಲ್ ಬಳಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಸಂಕೀರ್ಣವಾಗಿದ್ದು, ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗಬಾರದು ಎಂದು ನಿಯಮ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಸಿಲೆಬಸ್ ಪ್ರಕಾರ ಪ್ರಶ್ನೆಪತ್ರಿಕೆ ಸಿದ್ಧಪಡಿಸದೆ ಇದ್ದದ್ದು, ವಿಷಯವಾರು ಅಂಕ ವಿಂಗಡನೆ ನಿಯಮ ಪಾಲಿಸಲಿಲ್ಲ ಎಂಬ ಆರೋಪ ಇದೆ.
ಕನ್ನಡ ಮತ್ತು ಇಂಗ್ಲೀಷ್ ಪ್ರಶ್ನೆಗಳಲ್ಲಿ ತರ್ಜುಮೆ ವಿಷಯದಲ್ಲಿ ಗೊಂದಲ ಉಂಟಾದರೆ ಇಂಗ್ಲಿಷ್ ಪ್ರಶ್ನೆ ಅಂತಿಮ ಎಂಬ ಅವೈಜ್ಞಾನಿಕ ನಿಯಮ ಹಾಕಿರುವುದು ಕನ್ನಡಿಗರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಚರ್ಚೆ ಮಾಡಲಾಗುತ್ತಿದೆ.
ಮರು ಪರೀಕ್ಷೆಗೆ ಒತ್ತಾಯ: ಮರು ಪರೀಕ್ಷೆ ನಡೆಸಲು ಕೆಪಿಎಸ್‍ಸಿಗೆ ಸೂಕ್ತ ಆದೇಶವನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಸಂಘದ ಅಧ್ಯಕ್ಷೆ ಭವ್ಯಾ ನರಸಿಂಹಮೂರ್ತಿ ಮುಖ್ಯಮಂತ್ರಿಗೆ ಪತ್ರವನ್ನು ಬರೆದಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಭಾಷೆ ಹಾಗೂ ಮಾಧ್ಯಮಕ್ಕೆ ಒತ್ತು ನೀಡದೇ ಆಂಗ್ಲ ಭಾಷೆ ಅಂತಿಮ ಎಂದು ಸೂಚಿಸಿದೆ. ಹಾಗಾದರೆ ಕನ್ನಡ ಆಸ್ಮಿತೆ, ಮಾಧ್ಯಮ, ಹಕ್ಕುಗಳು, ಹಾಗೂ ಕನಸುಗಳು ಬರೀ ನಾಟಕಿಯವೇ? ಕನ್ನಡ ಸಾರ್ವಭೌಮತ್ವಕ್ಕೆ ಬೆಲೆ ಇಲ್ಲವೇ? ಕನ್ನಡದ ವಿರೋಧ ನೀತಿ ವಿರುದ್ಧ ಮತ್ತೊಮ್ಮೆ ಗೋಕಾಕ್ ತರಹದ ಚಳವಳಿ ಅನಿವಾರ್ಯವೇ? ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.