ಕೆಐಎಡಿಬಿ ಅಕ್ರಮ ಹಗರಣದ ಪ್ರಕರಣ: ಶೋಭಾ ಕರಂದ್ಲಾಜೆ ಬಂಧಿಸುವಂತೆ ಕಾಂಗ್ರೆಸ್ ಒತ್ತಾಯ
ಬೆಂಗಳೂರು: ಕೆಐಎಡಿಬಿ ಅಕ್ರಮ ಹಗರಣದ ಪ್ರಕರಣದಲ್ಲಿ ಆರೋಪ ಹೊತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯನ್ನು ಜಾರಿ ನಿರ್ದೇಶನಾಲಯ(ಈಡಿ) ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ನಗರದಲ್ಲಿ ಧರಣಿ ನಡೆಸಿದ್ದಾರೆ.
ಕೇಂದ್ರದ ಈಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳು ಭ್ರಷ್ಟ ಬಿಜೆಪಿ ಸಚಿವರನ್ನು ಮತ್ತು ಪಕ್ಷದ ನಾಯಕರನ್ನು ಬಂಧಿಸದೆ ಕ್ರಮ ಕೈಗೊಳ್ಳದೆ ವಿರೋಧ ಪಕ್ಷದ ನಾಯಕರನ್ನು ಬಂಧಿಸಿ ಬೆದರಿಸುತ್ತಿದೆ ಎಂಬುದಕ್ಕೆ ಶೋಭಾ ಕರಂದ್ಲಾಜೆ ಪ್ರಕರಣಕ್ಕೆ ಸಾಕ್ಷಿಯಾಗಿದೆ ಎಂದು ಮುಖಂಡರು ಆರೋಪಿಸಿದರು.
ಶೋಭಾ ಕರಂದ್ಲಾಜೆ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಹಾಗೂ ಅವರ ಪುತ್ರ ಜಗದೀಶ್ ಕಟ್ಟಾ ವಿರುದ್ಧ ಭ್ರಷ್ಟಾಚಾರದ ಹಗರಣ ದಾಖಲಾಗಿ ಸುಮಾರು 10 ವರ್ಷ ಕಳೆದಿದೆ. ಹಿಂದಿನ ಈ ಪ್ರಕರಣದಲ್ಲಿ ತನಿಖೆ ನಡೆದರೂ ಇಲ್ಲಿಯವರೆಗೂ ಶೋಭಾ ಕರಂದ್ಲಾಜೆ ಅವರನ್ನು ಬಂಧಿಸಿಲ್ಲ ಯಾಕೆ ಎಂಬುದನ್ನು ಈಡಿ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.
ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಬಿಜೆಪಿ ನಾಯಕರನ್ನು ಬಂಧಿಸುತ್ತಿಲ್ಲ. ಕೇವಲ ತನ್ನ ವಿರೋಧಿಗಳನ್ನು ಬಂಧಿಸಲು ಮಾತ್ರ ನರೇಂದ್ರ ಮೋದಿ ತನ್ನ ಅಧಿಕಾರವನ್ನು ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಭ್ರಷ್ಟ ಕೇಂದ್ರ ಬಿಜೆಪಿ ಸರಕಾರದ ಈ ಬಗ್ಗೆ ನೀತಿ ಎತ್ತಿ ತೋರುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಭ್ರಷ್ಟಾಚಾರದ ಹಗರಣದಲ್ಲಿ ಆರೋಪ ಹೊತ್ತು ಇಡೀ ತನಿಖೆಯನ್ನು ಎದುರಿಸುತ್ತಿರುವ ಶೋಭಾ ಕರಂದ್ಲಾಜೆಯನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಂತೆ ಸೂಕ್ತ ಕ್ರಮವನ್ನು ಚುನಾವಣಾ ಆಯೋಗವು ಸಹ ಕೈಗೊಳ್ಳಬೇಕು ಚುನಾವಣಾ ಆಯೋಗಕ್ಕೆ ಮಾಹಿತಿ ಮುಚ್ಚಿಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಧರಣಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಮುಖಂಡರಾದ ಎ.ಆನಂದ್, ಪ್ರಕಾಶ್ ಜಿ., ಹೇಮರಾಜು, ಬಾಲಕೃಷ್ಣ, ಪರಿಸರ ರಾಮಕೃಷ್ಣ, ಪುಟ್ಟರಾಜು, ರಂಜಿತ್, ಚಂದ್ರಶೇಖರ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.