ಕೊಪ್ಪಳ | ಬಿಸಿಯೂಟ ಸೇವಿಸಿ 100ಕ್ಕೂ ಅಧಿಕ ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು
ಕೊಪ್ಪಳ : ಶಾಲೆಯಲ್ಲಿ ಬಿಸಿಯೂಟ ಸೇವಿಸಿ 100ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡ ಘಟನೆ ಕುಷ್ಟಗಿ ತಾಲ್ಲೂಕಿನ ಬಿಜಕಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಅಸ್ವಸ್ಥಗೊಂಡ ಮಕ್ಕಳು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದ್ದು, ಮಧ್ಯಾಹ್ನ ಊಟ ಮಾಡಿದ ನಂತರ ಮಕ್ಕಳಲ್ಲಿ ಏಕಾಏಕಿ ವಾಂತಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಕುಷ್ಟಗಿ ತಾಲೂಕಿನ ಆಸ್ಪತ್ರೆಯಲ್ಲಿ 44 ಮಕ್ಕಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ದೋಟಿಹಾಳ ಗ್ರಾಮದ ಆರೋಗ್ಯ ಕೇಂದ್ರದಲ್ಲಿ 55 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಬಿಜಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ 500ಕ್ಕಿಂತಲೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಮಧ್ಯೆ ಅಡುಗೆ ಮಾಡುವವರ ಮೇಲೆ ಆರೋಪಗಳು ಕೇಳಿಬರುತ್ತಿದ್ದು, ಶಾಲೆಯಲ್ಲಿ ಬಿಸಿಯೂಟ ತಯಾರಿಸುವವರು ಗ್ರಾಮದ ಪ್ರಭಾವಿಗಳ ಕುಟುಂಬಕ್ಕೆ ಸೇರಿದವರು ಆಗಿದ್ದಾರೆ. ಊಟದಲ್ಲಿ ಏನೇ ವ್ಯತ್ಯಾಸ ಕಂಡು ಬಂದರೂ ಅವರನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.