ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಅಲ್ಪಸಂಖ್ಯಾತರಲ್ಲೂ ಆಕಾಂಕ್ಷಿಗಳಿದ್ದಾರೆ : ಸಚಿವ ರಹೀಂ ಖಾನ್

ಸಚಿವ ರಹೀಂ ಖಾನ್
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಅಲ್ಪಸಂಖ್ಯಾತ ಸಮುದಾಯದಲ್ಲೂ ಆಕಾಂಕ್ಷಿಗಳಿದ್ದಾರೆ. ಆದರೆ, ನಾವು ಎಲ್ಲವನ್ನೂ ಹೈಕಮಾಂಡ್ಗೆ ಬಿಟ್ಟಿದ್ದೇವೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಅಲ್ಪಸಂಖ್ಯಾತರಲ್ಲೂ ಕೆಪಿಸಿಸಿ ಆಕಾಂಕ್ಷಿಗಳಿದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಅಲ್ಪಸಂಖ್ಯಾತ ಸಮುದಾಯದಲ್ಲೂ ಪ್ರಬಲ ಆಕಾಂಕ್ಷಿಗಳಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್ ನಿರ್ಧಾರಗಳಿಗೆ ಯಾವುದೇ ವಿರೋಧ ಇಲ್ಲ. ಅವರು ಯಾರನ್ನೇ ನೇಮಿಸಿದರೂ ನಮ್ಮ ಸಹಮತ ಇರುತ್ತದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಲಿಷ್ಠವಾಗಿದೆ. ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯಗಳು ಸಹಜ ಆದರೆ, ನಮ್ಮಲ್ಲಿ ಒಡಕುಗಳಿಲ್ಲ. ನಮ್ಮ ಹೈಕಮಾಂಡ್ ನಿರ್ಧಾರಗಳು ದೂರದೃಷ್ಠಿಯಿಂದ ಕೂಡಿರುತ್ತವೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷರಾಗಿ ಯಾರೇ ನೇಮಕವಾದರೂ ತಕರಾರಿಲ್ಲ. ಈ ಬಾರಿಯ ಬಜೆಟ್ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೊಸ ಯೋಜನೆಗಳನ್ನು ಕೇಳಿದ್ದೇವೆ. ಸಮುದಾಯಕ್ಕೆ ನಮ್ಮ ಸರಕಾರದ ಪ್ರೋತ್ಸಾಹವಿದೆ ಎಂದು ರಹೀಂಖಾನ್ ಹೇಳಿದರು.