ʼಜಲಜೀವನ ಮಿಷನ್ ಯೋಜನೆ ಅನುಷ್ಠಾನದಲ್ಲಿ ಲೋಪʼ ತನಿಖೆಗೆ ತಂಡ : ಕೃಷ್ಣ ಭೈರೇಗೌಡ

ಬೆಂಗಳೂರು : ತುಮಕೂರು ಜಿಲ್ಲೆಯ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರಕಾರ ತನಿಖೆ ನಡೆಸಿ ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂವರು ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಟಿ.ಬಿ.ಜಯಚಂದ್ರರ ಗಮನ ಸೆಳೆಯುವ ಸೂಚನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಉತ್ತರಿಸಿದ ಅವರು, ತನಿಖಾ ತಂಡವು ತುಮಕೂರಿಗೆ ಭೇಟಿ ನೀಡಿ 571 ಕಾಮಗಾರಿಗಳನ್ನು ಆಯ್ಕೆ ಮಾಡಿ, 183 ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿದೆ. 25 ಅನರ್ಹ ಗುತ್ತಿಗೆದಾರರಿಗೆ 69 ಕಾಮಗಾರಿಗಳ ಟೆಂಡರ್ ನೀಡಿ, ಕಾರ್ಯಪಾಲಕ ಇಂಜಿನಿಯರ್ ಕರ್ತವ್ಯ ಲೋಪ ಎಸಗಿದ್ದಾರೆಂದು ಮಧ್ಯಂತರ ವರದಿ ನೀಡಿದೆ ಎಂದು ಉಲ್ಲೇಖಿಸಿದರು.
ಕರ್ತವ್ಯಲೋಪ ಎಸಗಿದ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಎಸ್.ರವೀಶ್ ಅವರ ವಿರುದ್ಧ ಇಲಾಖಾ ವಿಚಾರಣೆ ಕೈಗೊಳ್ಳಲು ಮತ್ತು ದೋಷಾರೋಪಪಟ್ಟಿ ಸಲ್ಲಿಸಲು ಸರಕಾರ ಅನುಮತಿ ನೀಡಿದೆ. ತನಿಖೆ ಅರ್ಧ ನಡೆಯುವುದರಿಂದ ಲೋಕಾಯುಕ್ತ ತನಿಖೆಗೆ ವಹಿಸಿದರೆ ವಿಳಂಬವಾಗುವುದು. ಇದೇ ತನಿಖಾತಂಡವನ್ನು ಮುಂದುವರಿಸುವ ಮತ್ತು ಎಲ್‍ಓಎ ಕೊಟ್ಟಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು, ಸಂಬಂಧಪಟ್ಟ ಶಾಸಕರೊಂದಿಗೆ ಚರ್ಚಿಸಲು ತಿಳಿಸಲಾಗುವುದು ಎಂದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ಸಿನ ಜಿ.ಟಿ.ಪಾಟೀಲ್, ಈ ಸಂಬಂಧ ಅಂದಾಜು ಸಮಿತಿಯಲ್ಲಿ ಚರ್ಚೆಯಾಗಿದೆ. ಲೋಕಾಯುಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು. ಬಿಜೆಪಿ ಸದಸ್ಯ ಸಿದ್ದು ಸವದಿ ಮಾತನಾಡಿ, ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆ ಕಳಪೆಯಿಂದ ಕೂಡಿದ್ದು, ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಟಿ.ಬಿ.ಜಯಚಂದ್ರ ಅವರು, ಜಲಜೀವನ್ ಮಿಷನ್ ಯೋಜನೆಯ 2528 ಕಾಮಗಾರಿಗಳಲ್ಲಿ ಅವ್ಯವಹಾರವಾಗಿದೆ. ರಸ್ತೆ ಕಾಮಗಾರಿ ಆಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿ ನಿವೃತ್ತರಾಗಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿರುವವರಿಗೆ ತಕ್ಕ ಶಾಸ್ತಿಯಾಗಲು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.