2 ತಿಂಗಳಲ್ಲಿನಲ್ಲಿಯೇ ಚಿಕ್ಕಮಗಳೂರಿನ ಜಂಟಿ ಸರ್ವೇ ಪೂರ್ಣ : ಕೃಷ್ಣ ಭೈರೇಗೌಡ

ಬೆಂಗಳೂರು: ಮುಂದಿನ ಎರಡು ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜಂಟಿ ಸರ್ವೇ ಕೆಲಸವನ್ನು ಪೂರ್ಣ ಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಕಾಂಗ್ರೆಸ್ ಸದಸ್ಯ ಎಚ್.ಡಿ. ತಮ್ಮಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಸರ್ವೇ ನಂಬರ್ ನಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ರೈತರಿಗೆ ಮಂಜೂರಾಗಿರುವ ಜಮೀನು ಸಹ ಇದೆ. ಇದನ್ನು ಸರಿಪಡಿಸಬೇಕು ಎಂದರೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಬೇಕು. ಹಿಂದೆ ಜಂಟಿ ಸರ್ವೇ ಮಾಡಲು ಸ್ಪಷ್ಟ ನಿರ್ದೇಶನ ಇರಲಿಲ್ಲ. ಆದರೆ, ಅರಣ್ಯ ಸಚಿವರ ಜೊತೆ ಸುದೀರ್ಘ ಸಭೆ ನಡೆಸಿ ಮೂರು ತಿಂಗಳ ಕಸರತ್ತಿನ ನಂತರ ಜಂಟಿ ಸರ್ವೇ ನಡೆಸಲು ಸುತ್ತೋಲೆ ಹೊರಡಿಸಲಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಜಂಟಿ ಸರ್ವೇ ಆರಂಭವಾಗಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಅಧಿಕಾರಿಗಳು ಎರಡು ತಿಂಗಳಲ್ಲಿ ಜಂಟಿ ಸರ್ವೇ ಮುಗಿಸುವ ಭರವಸೆ ನೀಡಿದ್ದಾರೆ. ಜಂಟಿ ಸರ್ವೇ ಮುಗಿದ ನಂತರ ಶಾಸಕರು ಉಲ್ಲೇಖಿಸಿರುವ ಇಂಡೀಕರಣಕ್ಕೆ ಬಾಕಿ ಇರುವ 248 ಪ್ರಕರಣಗಳ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.