ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಜಾರಿ : ಕೃಷ್ಣ ಬೈರೇಗೌಡ

ಬೆಂಗಳೂರು : ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಮಹತ್ವದ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ ಎಂದು ಕಂದಾಯ ಸಚಿವ ಹಾಗೂ ನಿಗಮದ ಅಧ್ಯಕ್ಷ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ‘ಸ್ವಯಂ ಉದ್ಯೋಗ ನೇರ ಸಾಲ’ ಯೋಜನೆಯಡಿಯಲ್ಲಿ ಆಯ್ಕೆಯಾದ 500 ಫಲಾನುಭವಿಗಳಿಗೆ 5ಕೋಟಿ ರೂ. ಸಾಲ-ಸಹಾಯಧನವನ್ನು ನೇರ ನಗದು ಪಾವತಿ (ಡಿಬಿಟಿ) ಮೂಲಕ ಹಣ ವರ್ಗಾವಣೆ ಮಾಡಿ ನಂತರ ಅವರು ಮಾತನಾಡಿದರು.
‘ಹೊಸ ಉದ್ಯಮಿಗಳಿಗೆ ಹಾಗೂ ಬಡವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಆರ್ಯ ವೈಶ್ಯ ನಿಗಮವು ಗಮನಾರ್ಹವಾದ ಕೆಲಸ ನಿರ್ವಹಿಸುತ್ತಿದೆ. ಒಂದು ಲಕ್ಷ ರೂ. ವರೆಗೆ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಸಾಲ-ಸಹಾಯಧನ ನೀಡಲಾಗುತ್ತಿದ್ದು, ಈ ಸೌಲಭ್ಯವನ್ನು ಫಲಾನುಭವಿಗಳು ವ್ಯಾಪಾರಕ್ಕಾಗಿ ಬಳಸಿಕೊಳ್ಳಬೇಕು. ತಮ್ಮ ಉದ್ಯಮವನ್ನು ಬೆಳೆಸಿ ತಾವೂ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು, ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದು ಅವರು ಕರೆ ನೀಡಿದರು.
2024-25ನೇ ಸಾಲಿನಲ್ಲಿ ಆರ್ಯ ವೈಶ್ಯ ನಿಗಮಕ್ಕೆ ಬಿಡುಗಡೆಯಾದ 10 ಕೋಟಿ ರೂ. ಅನುದಾನದಲ್ಲಿ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಬ್ಯಾಂಕುಗಳ ಸಹಯೋಗದಿಂದ ಆರ್ಯ ವೈಶ್ಯ ಆಹಾರ ವಾಹಿನಿ/ವಾಹಿನಿ ಯೋಜನೆ ಹಾಗೂ ವಾಸವಿ ಜಲಶಕ್ತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ನಿಗಮದಲ್ಲಿ ಸಾಲ ಪಡೆದು ಸಕಾಲದಲ್ಲಿ ಸಾಲ ತೀರಿಸಿದಂತಹ ಫಲಾನುಭವಿಗಳಿಗೆ ಪುನಃ ಸಾಲ ನೀಡಿ ಸಣ್ಣ ಉದ್ಯಮಿಗಳಿಗೆ ಉತ್ತೇಜನ ನೀಡಿರುವ ಏಕೈಕ ನಿಗಮ ಆರ್ಯವೈಶ್ಯ ನಿಗಮವಾಗಿದೆ. ಈ ಮೂಲಕ ನುರಿತ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚುವ ಗಮನಾರ್ಹ ಕೆಲಸಕ್ಕೆ ನಿಗಮವು ಮುಂದಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ತಲಾ 20 ಸಾವಿರ ರೂ. ಸಹಾಯಧನ ಹಾಗೂ 80 ಸಾವಿರ ರೂ. ಸಾಲ ಬಿಡುಗಡೆ ಮಾಡಿದ್ದು, ಫಲಾನುಭವಿಯು ಸಾಲವನ್ನು ಶೇ.4 ರಷ್ಟು ಬಡ್ಡಿ ದರದಲ್ಲಿ ಮರುಪಾವತಿಯನ್ನು ಯಾವುದೇ ಶುಲ್ಕವಿಲ್ಲದೇ https://kacdc.karnataka.gov.in ವೆಬ್‍ಸೈಟ್ ಮೂಲಕ ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಸಾಲ ಪಡೆದಂತಹ ಎಲ್ಲಾ ಫಲಾನುಭವಿಗಳು ಸಾಲವನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು ಮನವಿ ಮಾಡಿದ ಅವರು, ಇಲ್ಲಿಯವರೆಗೂ ನಿಗಮಕ್ಕೆ 6 ಕೋಟಿ ರೂ. ಮರುಪಾವತಿ ಮೊತ್ತ ಸ್ವೀಕೃತಿಯಾಗಿದ್ದು, ಎಲ್ಲಾ ಫಲಾನುಭವಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಆರ್ಯ ವೈಶ್ಯ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಅವರಿಗೆ ನಿಗಮಕ್ಕೆ 2025-26ನೇ ಸಾಲಿನ ಬಜೆಟ್‍ನಲ್ಲಿ 25 ಕೋಟಿ ರೂ. ಅನುದಾನವನ್ನು ಒದಗಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಮಾತನಾಡಿ, ನಿಗಮವು ಸಂಪೂರ್ಣವಾಗಿ ಗಣಕೀಕರಣಗೊಂಡಿರುವುದರಿಂದ ಸಕಾಲದಲ್ಲಿ ಎಲ್ಲಾ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲು ಸಾಧ್ಯವಾಗಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ಸೂಚಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ.ಕೆ ಮಾತನಾಡಿ, ನಿಗಮದ ಇತರೆ ಯೋಜನೆಗಳಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಡಿ.ಬಿ.ಟಿ ಮಾಡಲಾಗುವುದು ಎಂದು ಹೇಳಿದರು.