ಬೆಂಗಳೂರು | ಸುದ್ದಿಗೋಷ್ಠಿ ವೇಳೆ ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ : ಆಸ್ಪತ್ರೆಗೆ ದಾಖಲು
ಬೆಂಗಳೂರು: ಬಿಜೆಪಿ-ಜೆಡಿಎಸ್ ನಾಯಕರು ರಾಜ್ಯ ಸರಕಾರದ ವಿರುದ್ಧ ಪಾದಯಾತ್ರೆ ನಡೆಸುವ ಸಂಬಂಧ ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮೂಗಿನಿಂದ ಏಕಾಏಕಿ ರಕ್ತಸ್ರಾವವಾಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.
ಕುಮಾರಸ್ವಾಮಿ ಅವರನ್ನು ತಕ್ಷಣವೇ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಜಯನಗರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ‘ಯಾವುದೇ ಆತಂಕಪಡುವ ಅಗತ್ಯವಿಲ್ಲ, ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ’ ಎಂದು ವೈದ್ಯಕೀಯ ಮೂಲಗಳು ದೃಢಪಡಿಸಿವೆ.
ರವಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ದಿಢೀರನೇ ಕುಮಾರಸ್ವಾಮಿ ಮೂಗಿನಿಂದ ರಕ್ತ ಸೋರಿತು. ಕರವಸ್ತ್ರದಿಂದ ಮೂಗು ಮುಚ್ಚಿಕೊಂಡರೂ ರಕ್ತ ನಿಂತಿಲ್ಲ. ರಕ್ತ ಸೋರುವುದನ್ನು ನೋಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ಗಾಬರಿಗೆ ಒಳಗಾಗಿದ್ದರು.
ಬಟ್ಟೆಯಿಂದ ಮೂಗನ್ನು ಎಚ್‍ಡಿಕೆ ಪದೇ ಪದೇ ಒರೆಸಿಕೊಂಡರೂ ರಕ್ತ ಸೋರುವಿಕೆ ನಿಲ್ಲಲಿಲ್ಲ. ಮತ್ತೆ ಮೂಗಿನಿಂದ ರಕ್ತಸ್ರಾವ ಹೆಚ್ಚಾಗಿದ್ದು, ಅವರ ಬಿಳಿಯ ಶರ್ಟ್ ರಕ್ತಮಯವಾಗಿತ್ತು. ಇದನ್ನು ನೋಡಿದ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಅವರನ್ನು ಕಾರಿನಲ್ಲಿ ಜಯನಗರ ಅಪೋಲೋ ಆಸ್ಪತ್ರೆಗೆ ದಾಖಲಿಸಿದರು.
ಆತಂಕಪಡುವ ಅಗತ್ಯವಿಲ್ಲ: ‘ವಿಶ್ರಾಂತಿ ಇಲ್ಲದ ಕಾರಣಕ್ಕೆ ನಮ್ಮ ತಂದೆ ಕುಮಾರಸ್ವಾಮಿ ಅವರ ಮೂಗಿನಿಂದ ಏಕಾಏಕಿ ರಕ್ತಸ್ರಾವ ಆಗಿದೆ. ಅವರು ಆರೋಗ್ಯವಾಗಿದ್ದು, ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ’ ಎಂದು ಎಚ್‍ಡಿಕೆ ಅವರ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಣೆ ನೀಡಿದ್ದಾರೆ.