ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ನೈಜ ಹೋರಾಟಗಾರರ ವೇದಿಕೆ ಆಗ್ರಹ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆಗೆ ಹಾಜರಾದ ನಂತರ ಸುದ್ದಿಗೋಷ್ಠಿಯಲ್ಲಿ ಲೋಕಾಯುಕ್ತ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಂ.ಚಂದ್ರಶೇಖರ್ ಅವರನ್ನು ಏಕವಚನ ಪದ ಬಳಸಿ ನಿಂದಿಸಿದ್ದು, ಅವರ ವಿರುದ್ಧ ಕಾನೂನು ಕ್ರಮವಹಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಈ ಕುರಿತು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರಿಗೆ ಪತ್ರ ಬರೆದಿದ್ದು, ಕಾನೂನು ಕ್ರಮವಹಿಸುವ ಅಧಿಕಾರಿಗಳಿಗೆ ಈ ರೀತಿ ಬೆದರಿಸುವ ತಂತ್ರ ನಡೆಸುತ್ತಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಅಗತ್ಯ ಕಾನೂನು ಕ್ರಮಹಿಸಬೇಕು, ಹಾಗೂ ಪೊಲೀಸರ ಕರ್ತವ್ಯಕ್ಕೆ ಮತ್ತು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಎಂ.ಚಂದ್ರಶೇಖರ್ ಅವರನ್ನು ನಿಂದಿಸಿದ್ದಾರೆ ಎಂದು ವೇದಿಕೆ ಮಾಹಿತಿ ನೀಡಿದೆ.
ತಪ್ಪತಸ್ಥರು ರಾಜಕಾರಣಿಯೇ ಇರಲಿ, ಅಧಿಕಾರಿಯೇ ಇರಲಿ ಅವರ ವಿರುದ್ಧ ತನಿಖೆ ನಡೆಸಿ ಲೋಕಾಯುಕ್ತ ನ್ಯಾಯಮೂರ್ತಿಗಳು ಅಗತ್ಯ ಕ್ರಮವಹಿಸಬೇಕು. ಹಾಗೂ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾದ ಎಂ.ಚಂದ್ರಶೇಖರ್ ಅವರಿಗೆ ತಕ್ಷಣ ರಕ್ಷಣೆ ಒದಗಿಸಬೇಕೆಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.