ದಿಲ್ಲಿ ಫಲಿತಾಂಶ | ತುಷ್ಟೀಕರಣ ರಾಜಕೀಯವನ್ನು ತಿರಸ್ಕರಿಸಿದ್ದಕ್ಕೆ ಸ್ಪಷ್ಟ ಉದಾಹರಣೆ : ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಹೊಸದಿಲ್ಲಿ : ರಾಷ್ಟ್ರದ ರಾಜಧಾನಿ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು, ತುಷ್ಟೀಕರಣ ರಾಜಕೀಯವನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಹುದೊಡ್ಡ ಫಲಿತಾಂಶಕ್ಕೆ ಕಾರಣರಾದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಅಭಿನಂದಿಸುತ್ತೇನೆ. ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾರ ದೂರದೃಷ್ಟಿಯ ನಾಯಕತ್ವದಲ್ಲಿ ಬಿಜೆಪಿ ದಿಲ್ಲಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿಯವರ ಮಹತ್ವಾಕಾಂಕ್ಷೆಯ ವಿಕಸಿತ ಭಾರತ, ಆತ್ಮನಿರ್ಭರ ಭಾರತ ಮತ್ತು ಅಭಿವೃದ್ದಿಗೆ ಪೂರಕ ಆಡಳಿತಕ್ಕೆ ಮನ್ನಣೆ ನೀಡಿ, ತುಷ್ಟೀಕರಣ ರಾಜಕೀಯವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವುದಕ್ಕೆ ಈ ಫಲಿತಾಂಶ ಅತ್ಯುತ್ತಮ ಉದಾಹರಣೆ. ಈ ಜನಾದೇಶವು ಬಲಿಷ್ಠ ನಾಯಕತ್ವ, ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.