ಲೋಕಸಭೆ, ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ : ಲತಾ ಕುಮಾರಿ
ಬೆಂಗಳೂರು: ಮಹಿಳೆಯರ ಕುರಿತು ವೈಭವೀಕರಣದ ಮಾತುಗಳು ಕೇಳುತ್ತೇವೆ. ಆದರೆ ಇನ್ನೂ ಸಮಾಜದಲ್ಲಿ ಸಮಾನತೆ ಬಂದಿಲ್ಲ. ಲೋಕಸಭೆ ಮತ್ತು ವಿಧಾನಸಭೆ ಸೇರಿದಂತೆ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯಿದೆ ಎಂದು ಬೆಂಗಳೂರು ನಗರ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದ್ದಾರೆ.
ಶನಿವಾರ ನಗರದ ಸಚಿವಾಲಯ ಕ್ಲಬ್ನಲ್ಲಿ ಆಯೋಜಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಹಾಗೂ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರಿಗೆ ಸಮಾನ ಅವಕಾಶಗಳು ದೊರಕಬೇಕು ಎಂದು ಮಹಿಳಾ ಸಬಲೀಕರಣದ ಬಗ್ಗೆ ಮೊದಲು ಚಿಂತನೆ ಮಾಡಿದವರು ಅಂಬೇಡ್ಕರ್ ಎಂದು ಹೇಳಿದರು.
ನಾನು ಯಾಕೆ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುತ್ತೇನೆ ಎಂದರೆ, ಶಿಕ್ಷಣದಿಂದ ಮಾತ್ರ ಸಾಮಾಜಿಕ ಕ್ರಾಂತಿಯಾಗುತ್ತದೆ. ಶಿಕ್ಷಣವೇ ಮಾಂತ್ರಿಕ ಶಕ್ತಿ ಅದರಿಂದ ಸಮಾಜದಲ್ಲಿ ಎಲ್ಲ ಬದಲಾವಣೆಗಳು ಆಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಕೆ.ಚಿರಂಜೀವಿ, ಬೆಂಗಳೂರು ವಿವಿ ಕುಲಸಚಿವ ಶೇಖ್ ಲತೀಫ್, ಉಪನ್ಯಾಸಕ ಡಾ.ಚಂದ್ರಪ್ಪ, ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಂ.ಸುರೇಶ್ ಕುಮಾರ್, ನಿವೃತ್ತ ಇಂಜಿನಿಯರ್ ಗೋವಿಂದರಾಜು ವಿ., ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್, ಪದಾಧಿಕಾರಿಗಳಾದ ಡಾ.ಬಾಲಕೃಷ್ಣಪ್ಪ, ಡಾ.ವಿಜಯಕುಮಾರ್, ಸತ್ಯನಾರಾಯಣ, ಆರ್.ಮೋಹನ್, ಕೆಂಪಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.