ಯುವ ಜನರ ವಿರೋಧಿಯಾಗಿ ಕೆಲಸ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರ : ಲಕ್ಷ್ಮೀ ಹೆಬ್ಬಾಳ್ಕರ್
ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬೆಂಗಳೂರು: ದೇಶದಲ್ಲಿ ಆಳುತ್ತಿರುವ ಪಕ್ಷವು ಯುವ ಶಕ್ತಿಯನ್ನು ದುರ್ಬಲಗೊಳಿಸುತ್ತಿದ್ದು, ಮತೀಯ ವಿಚಾರಗಳನ್ನು ಮುಂದಿಟ್ಟು ಯುವ ಜನರ ಮನಸ್ಸನ್ನು ಕಲುಷಿತಗೊಳಿಸುತ್ತಿರುವ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರ ವಹಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ದೇಶದಲ್ಲಿ ಆಳುತ್ತಿರುವ ಬಿಜೆಪಿ ಸರಕಾರ ಯುವ ಜನರ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದರು.
ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚುತ್ತಿದೆ. ಬೆಲೆ ಏರಿಕೆ ಕಾರಣದಿಂದ ಬಡವರು, ಮಧ್ಯಮ ವರ್ಗದವರು ಹೈರಾಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜನರಲ್ಲಿ ದ್ವೇಷ, ಅಸೂಯೆಯನ್ನು ಅಳಿಸಿ ಪ್ರೀತಿಯ ಭಾರತವನ್ನು ಪುನರ್ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಯುವ ಜನರು ಕೈಜೋಡಿಸಬೇಕು ಎಂದು ಸಚಿವರು ಹೇಳಿದರು.
ಇಂದು ಯುವಕರ ಮುಂದೆ ಬಹಳಷ್ಟು ಸವಾಲುಗಳಿವೆ. ಮುಖ್ಯವಾಗಿ ನಿರುದ್ಯೋಗ ಸಮಸ್ಯೆ. ಕೇಂದ್ರದಲ್ಲಿ ಇರುವ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುತ್ತೇವೆಂದು ಹೇಳಿ, ನಂತರ ನೀವು ಬೊಂಡ, ಬಜ್ಜಿಯನ್ನು ಮಾರಿ ಎಂದು ಯುವಜನರನ್ನು ವಂಚಿಸಿದರೆಂದು ಸಚಿವರು ಹರಿಹಾಯ್ದರು.
ಯುವಜನರಿಗೆ ಕಾಂಗ್ರೆಸ್ ಸರಕಾರದಿಂದ ನಿರಾಸೆಯಾಗದು :
ರಾಜ್ಯದಲ್ಲಿ ಆಡಳಿತದಲ್ಲಿ ಇರುವಂತಹ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯುವಕರಿಗೆ, ಪದವೀಧರರಿಗೆ ನಿರಾಸೆಯನ್ನು ಮಾಡಬಾರದೆಂದು ʼಯುವ ನಿಧಿʼ ಎಂಬ ಉತ್ತಮ ಯೋಜನೆಯನ್ನು ರೂಪಿಸಿದೆ. ರಾಜ್ಯದ ಜನತೆಗೆ ಕೊಟ್ಟಂತಹ ಭರವಸೆಗಳನ್ನು ಈಡೇರಿಸಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು.
ದೇಶದ ಯುವಕರೆಂದರೆ ಭರವಸೆ. ಯುವಕರೆಂದರೆ ದೇಶದ ಶಕ್ತಿ. ಯುವಕರನ್ನು ಮೇಲೆತ್ತುವ ನಿಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ. ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರ ಶ್ರಮದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸುತ್ತಿದೆ ಎಂದು ತಿಳಿಸಿದರು.
ಮತೀಯ ಶಕ್ತಿಗಳ ಮೇಲೆ ನಿಗಾ :
ಬಿಜೆಪಿ, ಆರೆಸ್ಸೆಸ್, ಎಬಿವಿಪಿ, ಇವೆಲ್ಲದರ ಬಗ್ಗೆ ಯುವ ಕಾಂಗ್ರೆಸ್ ಕಾಯರ್ಕರ್ತರು ಅತ್ಯಂತ ನಿಗಾ ವಹಿಸಬೇಕಿದೆ. ನಗರ, ಹಳ್ಳಿಗಳೆನ್ನದೆ ಎಲ್ಲ ಕಡೆಗಳಲ್ಲೂ ಬಹಳ ಸೂಕ್ಷ್ಮವಾಗಿ ಮತೀಯ ಶಕ್ತಿಗಳ ಮೇಲೆ ಕಣ್ಣು ಇಡಬೇಕಾಗಿದೆ. ಹೆಚ್ಚು ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ಕಾರ್ಯಕ್ರಮಗಳು, ಯೋಜನೆಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಜನತೆಗೆ ತಿಳಿಸಬೇಕೆಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಸಂತೋಷ್ ಲಾಡ್ ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಬಸನಗೌಡ ಬಾದರ್ಲಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು, ಹಿರಿಯ ಮುಖಂಡರಾದ ಬಿ.ಎಲ್.ಶಂಕರ್, ವಿನಯ್ ಕುಮಾರ್ ಸೊರಕೆ, ವಿ.ಆರ್.ಸುದರ್ಶನ್, ಯುವ ಮುಖಂಡರಾದ ಮೃಣಾಲ್ ಹೆಬ್ಬಾಳ್ಕರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ನಲಪಾಡ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.