ಭೂ ಕಬಳಿಕೆ ಆರೋಪ: ಯಡಿಯೂರಪ್ಪರಿಗೆ ಲೋಕಾಯುಕ್ತ ಸಮನ್ಸ್
ಬೆಂಗಳೂರು, ಸೆ.21: ಹಾಲಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಭೂ ಕಬಳಿಕೆಯ ಆರೋಪ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಯಡಿಯೂರಪ್ಪರಿಗೆ ಸಂಕಷ್ಟ ಎದುರಾಗಿದೆ. ಡಿನೋಟಿಫಿಕೇಷನ್ ಹಗರಣಕ್ಕೆ ಹಗರಣಕ್ಕೆ ಸಂಬಂಧಿಸಿ ಯಡಿಯೂರಪ್ಪರಿಗೆ ಲೋಕಾಯುಕ್ತ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಬೆಂಗಳೂರಿನ ಗಂಗೇನಹಳ್ಳಿ ಬಡಾವಣೆಯಲ್ಲಿನ 1 ಎಕರೆ 11 ಗುಂಟೆ ಸರಕಾರಿ ಜಮೀನನ್ನು ಸತ್ತು ಹೋಗಿರುವವರ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿಯಾಗಿ ಡಿನೋಟಿಫೈ ಮಾಡಿ ಕುಮಾರಸ್ವಾಮಿ ಅವರ ಬಾಮೈದನ ಹೆಸರಲ್ಲಿ ನೋಂದಣಿ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಸ್ವತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ದಿನೇಶ್ ಗುಂಡೂರಾವ್ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ದಾಖಲೆಗಳ ಸಮೇತ ಆರೋಪಿಸಿದ್ದರು.
ಇದರ ಬೆನ್ನಲ್ಲೇ, ಹಗರಣದ ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಕೃಷ್ಣ ಬೈರೇಗೌಡ ಮಾಡಿರುವ ಆರೋಪಗಳೇನು?
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಗಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1976 ರಲ್ಲೇ ಭೂ ಸ್ವಾಧೀನ ಮಾಡಿಕೊಂಡಿದೆ. 1976ರಲ್ಲಿ ಆರಂಭವಾದ ಭೂ ಸ್ವಾಧೀನ ಪ್ರಕ್ರಿಯೆ 1978ರಲ್ಲಿ ಮುಗಿದಿದೆ.
ಈ ಜಮೀನಿನ ವಾರಸುದಾರರಿಗೆ ಸಂಬಂಧವೇ ಇಲ್ಲದ ಬೇನಾಮಿ ವ್ಯಕ್ತಿ ರಾಜಶೇಖರಯ್ಯ ಎಂಬವರು 1978ರಲ್ಲಿ ಭೂ ಸ್ವಾಧೀನಗೊಂಡ ಜಮೀನಿಗೆ ಡಿನೋಟಿಫೈ ಮಾಡಲು 2007ರಲ್ಲಿ ಕುಮಾರಸ್ವಾಮಿಗೆ ಅರ್ಜಿ ಹಾಕಿದ್ದಾರೆ. ಈ ಅರ್ಜಿ ಬಂದ ಕೂಡಲೇ ಕುಮಾರಸ್ವಾಮಿ ಅದೇ ದಿನ ಅಧಿಕಾರಿಗಳಿಗೆ ಪತ್ರ ಬರೆದು ಈ ಅರ್ಜಿ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುತ್ತಾರೆ. ಆದರೆ, ಅಧಿಕಾರಿಗಳು, ‘1976ರಲ್ಲಿ ಆರಂಭಗೊಂಡ ಈ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ 1978 ರಲ್ಲಿ ಮುಗಿದಿದೆ. ಹೀಗಾಗಿ ಭೂಸ್ವಾಧೀನ ಮಾಡಲು ಬರಲ್ಲ’ ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಆದರೂ, ಈ ವಿಚಾರವನ್ನು ಕೈಬಿಡದ ಕುಮಾರಸ್ವಾಮಿ ಈ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಕಾನೂನು ಪ್ರಕಾರ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಕೃಷ್ಣ ಬೈರೇಗೌಡರ ಆರೋಪ.
ಇದೇ ಸಂದರ್ಭದಲ್ಲಿ ಈ ಜಮೀನಿನ ಅಸಲಿ ಮಾಲಕರಾದ 21 ಜನರ ಜೊತೆ ಕುಮಾರಸ್ವಾಮಿಯವರ ಅತ್ತೆ ಜಿಪಿಎ ಮಾಡಿಕೊಳ್ಳುತ್ತಾರೆ. ಈ ಮಧ್ಯೆ ಅಧಿಕಾರ ಹೊಂದಾಣಿಕೆ ಸಮಸ್ಯೆಯಿಂದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಉರುಳಿ ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆ ಎಂದು ಅವರು ತಿಳಿಸಿದರು.
ಆನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಆದರೆ, ಅಲ್ಲಿಯವರೆಗೆ ಹಾವು ಮುಂಗೂಸಿಯಂತೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರೂ ಸಹ ಇದೇ ಅರ್ಜಿ ಮೇಲೆ ಕ್ರಮ ವಹಿಸಲು ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದು ಏಕೆ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಸೂಚನೆಗೆ ಸ್ಪಷ್ಟವಾಗಿ ಉತ್ತರಿಸಿದ್ದ ಇಲಾಖೆ ಪ್ರಧಾನ ಕಾರ್ಯದರ್ಶಿ ಜ್ಯೋತಿರಾಮಲಿಂಗಂ, ‘ಗಂಗೇನಹಳ್ಳಿ ಬಡಾವಣೆಯ ಈ ಭೂಮಿಯನ್ನು ಈಗಾಗಲೇ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಹೀಗಾಗಿ ಡಿನೋಟಿಫೈ ಮಾಡಲು ಸಾಧ್ಯವಿಲ್ಲ’ ಎಂದು ಬರೆದಿದ್ದರು. ಆದರೆ, ಯಡಿಯೂರಪ್ಪ ಪ್ರಧಾನ ಕಾರ್ಯದರ್ಶಿಯ ಅಭಿಪ್ರಾಯ ಗಾಳಿಗೆ ತೂರಿ ಸಂಬಂಧಿತ ಕಡತದ ಮೇಲೆ ಭೂಸ್ವಾಧೀನ ಕೈಬಿಡಲು ಆದೇಶಿಸಿದೆ ಎಂದು ಬರೆದಿದ್ದಾರೆ. 1978ರಲ್ಲಿ ಭೂ ಸ್ವಾಧೀನ ಆಗಿರುವ ಜಮೀನಿಗೆ 2009-10 ರಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂದು ದಾಖಲೆಗಳ ಸಮೇತ ಅವರು ಆರೋಪಿಸಿದ್ದರು.
ಒಟ್ಟಾರೆ ಈ ಜಮೀನನ್ನು ಯಡಿಯೂರಪ್ಪ ರನ್ನು ಉಪಯೋಗಿಸಿಕೊಂಡು ಮೃತಪಟ್ಟವನ ಹೆಸರಿಗೆ ಡಿನೋಟಿಫೈ ಮಾಡಿಸಿದ್ದಾರೆ. ಸತ್ತೋದವನಿಂದ ಕುಮಾರಸ್ವಾಮಿಯವರ ಅತ್ತೆ ಹೆಸರಿಗೆ ಜಿಪಿಎ ಮಾಡಲಾಗಿದೆ. ಅವರಿಂದ ಕುಮಾರಸ್ವಾಮಿಯವರ ಬಾಮೈದನಿಗೆ ನೋಂದಣಿ ಮಾಡಿಕೊಡಲಾಗಿದೆ. ನೂರಾರು ಕೋಟಿ ಮೌಲ್ಯ ಇರುವ ಬಡವರಿಗೆ ನಿವೇಶನಗಳನ್ನು ಕಲ್ಪಿಸಬೇಕಾದ ಸ್ವತ್ತು, ಅಕ್ರಮವಾಗಿ ಇಬ್ಬರು ಮಾಜಿ ಸಿಎಂಗಳ ಜಂಟಿ ಕಾರ್ಯಾಚರಣೆಯಿಂದ ಕಬಳಿಕೆಯಾಗಿದೆ ಎಂದು ಕೃಷ್ಣ ಬೈರೇಗೌಡ ಆರೋಪಿಸಿದ್ದಲ್ಲದೆ, ಈ ಬಗ್ಗೆ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ್ದರು.