ನನ್ನ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ: ಸಿ.ಟಿ.ರವಿ ಎಚ್ಚರಿಕೆ
ಬೆಂಗಳೂರು: ತನ್ನ ವಿರುದ್ಧ ಸುಳ್ಳು ಸುದ್ದಿ ಹರಡುವ, ಅಪಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಮುಂದುವರಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಲಾಗುವುದು ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಸಿ.ಟಿ.ರವಿ, "ಇತ್ತೀಚಿಗೆ ಕೆಲವು ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿಗಳು ನಾನು ಹೇಳದೆ ಇರುವ ಮಾತುಗಳನ್ನು, ನಾನು ಕೊಡದೆ ಇರುವ ಹೇಳಿಕೆಗಳನ್ನು, ನನ್ನ ಹೇಳಿಕೆ/ಪತ್ರಿಕಾ ಪ್ರಕಟಣೆ (Fake News) ಎಂದು ತೋರಿಸುವ ರೀತಿಯಲ್ಲಿ ಫೋಟೋ ಎಡಿಟ್ ಮಾಡಿ, ನನ್ನ ವಿರುದ್ಧ ಅಪಪ್ರಚಾರ ಮಾಡಿರುವುದು, ಕೆಲ ಜಾತಿ ಮತ್ತು ಸಮಾಜವನ್ನು ನನ್ನ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ಪಡುತ್ತಿರುವುದು ಸ್ಪಷ್ಟವಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆರಂಭವಾದ ಈ ಕೆಟ್ಟ ಚಾಳಿ ನಿಲ್ಲಲೇ ಬೇಕು" ಎಂದು ಒತ್ತಾಯಿಸಿದ್ದಾರೆ.
"ಇಂತಹ ಸುಳ್ಳು ಸುದ್ದಿ ಹರಡುವ, ಅಪಪ್ರಚಾರ ಮಾಡುವ, ಸಮಾಜದಲ್ಲಿ ಶಾಂತಿಯನ್ನು ಕದಡುವ ಚಟುವಟಿಕೆಗಳನ್ನು ಇಂಥಹ ವ್ಯಕ್ತಿಗಳು ತಕ್ಷಣವೇ ನಿಲ್ಲಿಸಬೇಕು. ಈ ರೀತಿಯ ಕೃತ್ಯಗಳು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಲಾಗುವುದು" ಎಂದು ಅವರು ಎಚ್ಚರಿಸಿದ್ದಾರೆ.
"ಒಂದು ವೇಳೆ ಆ ವೇಳೆ ಬಿಜೆಪಿ, ಆರೆಸ್ಸೆಸ್, ಸಂಘ ಪರಿವಾರ ಪ್ರಬಲವಾಗಿದ್ದಿದ್ದರೆ ಅಂಬೇಡ್ಕರ್ ಸಂವಿಧಾನ ಜಾರಿಯಾಗಲು ಬಿಡುತ್ತಿರಲಿಲ್ಲ" ಎಂದು ಸಿ.ಟಿ.ರವಿ ಹೇಳಿದ್ದಾಗಿ ಸಾಮಾಜಿಕ ಜಾಲತಾದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಬೆಂಗಳೂರಿನ ನಾಗೇಶ್ ಎಂಬಾತನ ವಿರುದ್ಧ ನೀಡಿರುವ ಪೊಲೀಸ್ ದೂರಿನ ಪ್ರತಿಯನ್ನೂ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.