ಅಮಾನವೀಯ ಬರವಣಿಗೆಯನ್ನು ನಿರಾಕರಿಸೋಣ: ಪ್ರೊ.ಬರಗೂರು ರಾಮಚಂದ್ರಪ್ಪ

ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು : ಮಾನವೀಯ ಮೌಲ್ಯವನ್ನು ಒಳಗೊಂಡಿರುವ ಬರಹಗಳಿಗೆ ಮನ್ನಣೆಕೊಡಬೇಕಿದೆ. ಬಹಳ ಅಮಾನವೀಯವಾಗಿರುವ ಬರವಣಿಗೆಯನ್ನು ನಾವು ನಿರಾಕರಿಸೋಣ ಎಂದು ಹಿರಿಯ ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕಸಾಪ ಆವರಣದಲ್ಲಿರುವ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಅಮೂಲ್ಯ ಪ್ರಕಾಶನದ ವತಿಯಿಂದ ಆಯೋಜಿಸಿದ್ದ, ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ‘ಹವೇಲಿ ದೊರೆಸಾನಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಕಥೆಗಳಲ್ಲಿ ಸರಳತೆ ಮತ್ತು ಜನಪ್ರಿಯತೆಯಿದೆ. ಅವರದೇ ರೀತಿಯಲ್ಲಿ ಕಥೆಯನ್ನು ಕಟ್ಟಿದ್ದಾರೆ ಎಂದು ತಿಳಿಸಿದರು.
ಕನ್ನಡದ ಕಥಾಲೋಕ ಬೇರೆ ಬೇರೆ ವಸ್ತು ವಿನ್ಯಾಸಗಳ ಮುಖಾಂತರ ವೈವಿಧ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಕಥೆಗಳಲ್ಲಿ ಅವರದೇ ಆದ ವಸ್ತು ವಿನ್ಯಾಸಗಳಿವೆ. ಒಂದು ಕಾಲದ ಕಾಳಜಿಯಾಗಿ ಕನ್ನಡದ ಕಥಾಲೋಕ ಬಂದಿದೆ. ಪ್ರಾಚೀನದಿಂದ ಆಧುನಿಕ ಸಾಹಿತ್ಯದ ವರೆಗೆ ಕನ್ನಡ ಸಾಹಿತ್ಯ ಒಂದು ರೀತಿಯಲ್ಲಿ ಕಥನ ಕಲೆಯ ಪ್ರಯೋಗಶಾಲೆಯಂತೆ ಎಂದು ಹೇಳಿದರು.
ಬರವಣಿಗೆಯಲ್ಲಿನ ವೈವಿಧ್ಯತೆ ಎನ್ನುವುದೇ ಸೃಜನಶೀಲತೆಯ ಲಕ್ಷಣ. ಅದು ಏಕತಾನತೆಯಿಂದ ಕೂಡಿರುವುದಿಲ್ಲ. ಏಕತಾನತೆಯಿರುವುದು ಜಡವಾಗುತ್ತದೆ ಎಂದು ಅವರು ತಿಳಿಸಿದರು.
ಪತ್ರಕರ್ತ ರಘುನಾಥ ಚ.ಹ. ಮಾತನಾಡಿ, ‘ಇವತ್ತಿನ ಸಾಹಿತ್ತಿಕ ಸಂದರ್ಭದಲ್ಲಿ ಜನಪ್ರಿಯ ಸಾಹಿತ್ಯ ಅತ್ಯಂತ ಪ್ರಮುಖ ಪ್ರಕಾರವಾಗಿದೆ. ಕೆಲವು ಲೇಖಕರು ಅತ್ಯಂತ ಪ್ರಜ್ಞಾಪೂರ್ವಕವಾಗಿ ಜನಪ್ರಿಯ ಸಾಹಿತ್ಯದಲ್ಲಿ ತೊಡಗಿದ್ದಾರೆ. ಆ ಮೂಲಕ ತಮ್ಮದೇ ಆದ ಓದುಗ ವಲಯವನ್ನು ಸೃಷ್ಠಿ ಮಾಡಿಕೊಂಡಿದ್ದಾರೆ. ಜನಪ್ರಿಯ ಸಾಹಿತ್ಯ ಜನಪರವೂ ಆದಾಗ ಮಾತ್ರ ಅದಕ್ಕೆ ವಿಶೇಷ ಮಹತ್ವ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇವತ್ತಿನ ಕಾಲಘಟ್ಟದಲ್ಲಿನ ಜನಪ್ರಿಯ ಸಾಹಿತ್ಯ ಕೇವಲ ಜನಪ್ರಿಯತೆಯ ನೆಲೆಗಟ್ಟಿನಲ್ಲಿ ಮಾತ್ರ ಉಳಿದಿದೆ. ಅದನ್ನು ಹೊರತುಪಡಿಸಿ, ಅಗತ್ಯವಾದ ಮಾದರಿಯನ್ನು ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಕಂಡುಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಥೆಗಾರ್ತಿ ಶ್ರುತಿ ಬಿ.ಆರ್, ಮಲ್ಲಿಕಾರ್ಜುನ ಶೆಲ್ಲಿಕೇರಿ, ಎಸ್.ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.